ಉತ್ತರ ಪ್ರದೇಶದ ಜೇವರ್ನಲ್ಲಿ ನಿರ್ಮಾಣವಾಗಲಿರುವ ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜ್ಯದ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡಲಿದೆ. ಅಲ್ಲದೇ ಪ್ರವಾಸೋದ್ಯಮ, ರಫ್ತು ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕಾಣಲಿದೆ. ನೋಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಪಾಲಿಗೆ ಲಾಜಿಸ್ಟಿಕ್ ಗೇಟ್ವೇ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ವಿಮಾನ ನಿಲ್ದಾಣವು ಉತ್ತರ ಪ್ರದೇಶದಲ್ಲಿ ರಫ್ತಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ರಾಜ್ಯದ ಸಾವಿರಾರು ಯುವಕರಿಗೆ ಉದ್ಯೋಗವನ್ನು ಒದಗಿಸುತ್ತದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಕೂಡ ಅಭಿವೃದ್ಧಿ ಕಾಣುತ್ತದೆ. ಜೇವಾರ್ ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ಜನರು ಪ್ರಯೋಜನ ಪಡೆಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಪ್ರದೇಶವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ನೇರವಾಗಿ ಸಂಪರ್ಕಿಸುತ್ತದೆ. ಇಲ್ಲಿನ ರೈತರಿಗೆ ತರಕಾರಿ, ಹಣ್ಣು ಹಾಗೂ ಮೀನಿನಂತಹ ಬಹುಬೇಗನೆ ಕೊಳೆಯಬಹುದಾದ ವಸ್ತುಗಳನ್ನು ಅತ್ಯಂತ ವೇಗವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಈ ವಿಮಾನ ನಿಲ್ದಾಣದಿಂದಾಗಿ ದೇಶದ ಪಶ್ಚಿಮ ಹಾಗೂ ಉತ್ತರ ಭಾಗವು ವಿದೇಶಿ ಮಾರುಕಟ್ಟೆಗಳನ್ನು ತಲುಪುವುದು ಸುಲಭವಾಗಲಿದೆ ಎಂದು ಹೇಳಿದ್ರು.
ಪ್ರತಿ ವರ್ಷ ನಾವು ಇತರೆ ದೇಶಗಳಲ್ಲಿ ವಿಮಾನ ನಿಲ್ದಾಣಗಳ ರಿಪೇರಿಗೆಂದು 15 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. ಆದರೆ ಇನ್ಮೇಲೆ ಈ ದುರಸ್ತಿಯನ್ನು ಹಾಗೂ ನಿರ್ವಹಣೆಯನ್ನು ಇಲ್ಲಿಯೇ ಕೈಗೊಳ್ಳಬಹುದು ಎಂದು ಪ್ರಧಾನಿ ಹೇಳಿದ್ರು.