ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅಯೋಧ್ಯೆ ನಗರಕ್ಕೆ ವಿವಿಧ ಕಡೆಗಳಿಂದ ಬರುವವರನ್ನು ಸ್ವಾಗತಿಸಲು ಬೃಹತ್ ಪ್ರವೇಶ ದ್ವಾರಗಳ ನಿರ್ಮಾಣ ಮಾಡಲಾಗುತ್ತಿದೆ.
ಈ ಪ್ರವೇಶ ದ್ವಾರಗಳಿಗೆ ರಾಮಾಯಣ ಪಾತ್ರಗಳ ಹೆಸರು ಇಡಲು ತೀರ್ಮಾನ ಕೈಗೊಳ್ಳಲಾಗಿದೆ. ಲಕ್ನೋ ಕಡೆಯಿಂದ ಬರುವವರು ‘ಶ್ರೀರಾಮ ದ್ವಾರ’ದ ಮೂಲಕ ಆಗಮಿಸಲಿದ್ದಾರೆ, ಗೋರಖ್ ಪುರ ರಸ್ತೆಯ ಪ್ರವೇಶ ದ್ವಾರಕ್ಕೆ ‘ಹನುಮಾನ್ ದ್ವಾರ’, ಅಲಹಾಬಾದ್ ರಸ್ತೆಯ ಪ್ರವೇಶ ದ್ವಾರಕ್ಕೆ ‘ಭರತ ದ್ವಾರ’ ಎಂದು ಹೆಸರಿಡಲಾಗುವುದು.
ಗೊಂಡಾ ರಸ್ತೆಯ ಪ್ರವೇಶ ದ್ವಾರಕ್ಕೆ ‘ಲಕ್ಷ್ಮಣ ದ್ವಾರ’, ದ್ವಾರಣಾಸಿ ರಸ್ತೆಯ ಪ್ರವೇಶ ದ್ವಾರಕ್ಕೆ ‘ಜಟಾಯು ದ್ವಾರ’, ರಾಯಿಬರೇಲಿ ರಸ್ತೆಯ ಪ್ರವೇಶ ದ್ವಾರಕ್ಕೆ ‘ಗರುಡ ದ್ವಾರ’ ಎಂದು ಹೆಸರಿಡಲಾಗುವುದು. ಈ ಎಲ್ಲಾ ಪ್ರವೇಶ ದ್ವಾರಗಳ ಸಮೀಪ ವಾಹನಗಳ ಪಾರ್ಕಿಂಗ್, ರೆಸ್ಟೋರೆಂಟ್ ಮತ್ತು ಹೋಟೆಲ್, ಶೌಚಾಲಯ ಸೇರಿದಂತೆ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲಾಗುವುದು.
ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವನ್ನಾಗಿ ರೂಪಿಸುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಕನಸಾಗಿದೆ. ಅಯೋಧ್ಯ ನಗರದ ಪೌರಾಣಿಕ ಪರಂಪರೆಯನ್ನು ಪ್ರವಾಸಿಗರು, ಭಕ್ತರಿಗೆ ಪರಿಚಯಿಸಲು ರಾಮಾಯಣ ಪಾತ್ರಗಳ ಹೆಸರುಗಳನ್ನು ಅಯೋಧ್ಯ ನಗರಕ್ಕೆ ಪ್ರವೇಶಿಸುವ ಪ್ರವೇಶ ದ್ವಾರಗಳಿಗೆ ಇಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಹೇಳಿದ್ದಾರೆ.