
ಮಡಿಕೇರಿ: ಕೊಡಗಿನ ಕುಶಾಲನಗರದ ಕೂಡ್ಲುರುವಿನಲ್ಲಿ ನೂತನವಾಗಿ ನಿರ್ಮಿಸಿದ್ದ ಸಿಎನ್ ಜಿ ಗ್ಯಾಸ್ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ.
ಅನಿಲ ಸೋರಿಕೆಯಿಂದಾಗಿ ಸುತ್ತಮುತ್ತ ಪ್ರದೇಸದಲ್ಲಿ ದುರ್ವಾಸನೆ ಬರುತ್ತಿದ್ದು, ಇದರಿಂದಾಗಿ ಸ್ಥಳೀಯ ನಿವಾಸಿಗಳು ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, ಹಲವರ ಆರೋಗ್ಯದಲ್ಲಿ ಏರುಪೇರಾಗಿದೆ. ಚಿಕ್ಕಮಕ್ಕಳು ವಾಕರಿಕೆ, ವಾಂತಿಯಿಂದ ಅಸ್ವಸ್ಥರಾಗಿದ್ದಾರೆ.
ಜನರು ಅಸ್ವಸ್ಥರಾಗುತ್ತಿದ್ದಂತೆ ಆತಂಕಗೊಂಡ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಗ್ಯಾಸ್ ಬಂಕ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟಕದವರ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನವಸತಿ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಗ್ಯಾಸ್ ಬಂಕ್ ನಿಂದ ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕಿಡಿಕಾರಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.