
ಬೆಂಗಳೂರು: 2030ರೊಳಗೆ 60 ಲಕ್ಷ ಮನೆಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬೇರೆ ಬೇರೆ ದರ ಇದ್ದ ಕಾರಣ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ವಿಳಂಬವಾಗಿದ್ದು, ಇದೀಗ ಸಮಸ್ಯೆ ಪರಿಹರಿಸಲಾಗಿದೆ. 2030ರೊಳಗೆ ಮಿಕ್ಕಿರುವ 60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಗ್ಯಾಸ್ ಪೈಪ್ಲೈನ್ ಮೂಲಕ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಗ್ಯಾಸ್ ಪೂರೈಕೆ ಕೊಳವೆ ಅಳವಡಿಸಲು ನಗರ ಅನಿಲ ಸರಬರಾಜು ನೀತಿಯ ಪ್ರಕಾರ ಮೀಟರ್ ಗೆ ಒಂದು ರೂಪಾಯಿ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 60.25 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. 1022 CNG ಮರುಪೂರಣ ಕೇಂದ್ರ ತೆರೆಯುವ ಗುರಿ ಹೊಂದಲಾಗಿದೆ. 2015ರಲ್ಲಿ ಯೋಜನೆ ಆರಂಭವಾಗಿದ್ದು ಬೆಂಗಳೂರಿನಲ್ಲಿ ಭಾರತೀಯ ಅನಿಲ ಪ್ರಾಧಿಕಾರ ಇದರ ಕಾಮಗಾರಿ ಕೈ ಎತ್ತಿಕೊಂಡಿದ್ದು, 2023ರ ವರೆಗೆ 4.07 ಲಕ್ಷ ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. 320 ಸಿಎಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಹೊಸ ನೀತಿ ರೂಪಿಸಿದ ನಂತರ 1.01 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದು, 154 CNG ಕೇಂದ್ರಗಳನ್ನು ಆರಂಭಿಸಲಾಗಿದೆ. ಮತ್ತಷ್ಟು ವೇಗ ನೀಡಲು ಸ್ಥಳೀಯ ನಗರ ಸಂಸ್ಥೆಗಳ ಜೊತೆಗೂ ಸಮನ್ವಯ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.