ಡಿಸೆಂಬರ್ 31 ರೊಳಗೆ ಗ್ಯಾಸ್ ಏಜೆನ್ಸಿ ಬಳಿ KYC ಕಡ್ಡಾಯ. ಇಲ್ಲವಾದಲ್ಲಿ ಸಿಲಿಂಡರ್ ದರ ಕಮರ್ಷಿಯಲ್ ಆಗಿ ಬದಲಾಗಿ 1400 ರೂ. ಆಗಲಿದೆ ಎಂಬ ಸುದ್ದಿ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶ ನೋಡುತ್ತಿದ್ದಂತೆ ಗ್ರಾಹಕರು ಕೆವೈಸಿ ಮಾಡಿಸಲು ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಆದರೆ ಇದು ಎಲ್ಲಾ ಗ್ರಾಹಕರಿಗೂ ಅನ್ವಯವಾಗುವುದಿಲ್ಲ ಎಂಬ ಸಂಗತಿ ಬಯಲಾಗಿದೆ.
ಡಿಸೆಂಬರ್ 31 ರೊಳಗೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಗ್ಯಾಸ್ ಏಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು. ಆಗ ಮಾತ್ರ ಜನವರಿ 1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರಿಂದ 500 ರೂ. ಗೆ ಸಿಗುತ್ತದೆ. ಒಂದು ವೇಳೆ KYC ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400 ಕ್ಕೆ ಪಡೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜವೇ ಎಂಬುದನ್ನು ಪರಿಶೀಲಿಸಿದಾಗ ಉಜ್ವಲ ಯೋಜನೆ ಗ್ರಾಹಕರಿಗೆ ಮಾತ್ರ ಅನ್ವಯ ಎಂಬುದು ಗೊತ್ತಾಗಿದೆ.
ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು KYC ಮಾಡಿಸಬೇಕಾದ ಅಗತ್ಯವಿಲ್ಲ. ಒಂದು ವೇಳೆ ಕೆವೈಸಿ ಮಾಡಿಸದಿದ್ದರೆ ಕಮರ್ಷಿಯಲ್ ಆಗಿ ಬದಲಾಗುತ್ತದೆ ಎಂಬುದೂ ಸುಳ್ಳು.
ವೈರಲ್ ಆಗಿರುವ ವಾಟ್ಸಾಪ್ ಸಂದೇಶದಲ್ಲಿ ಹುರುಳಿಲ್ಲ. ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಅವರು ಮಾತ್ರ ಆಧಾರ ದೃಢೀಕರಿಸಬೇಕು. ಹಾಗಾಗಿ ಉಳಿದ ಗ್ರಾಹಕರು ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎನ್ನಲಾಗಿದೆ.