
ಉಡುಪಿ: ಉಡುಪಿಯ ಗರುಡ ಗ್ಯಾಂಗ್ ನ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡಿ ಬಂಧಿಸಿದ್ದಾರೆ.
ಗರುಡ ಗ್ಯಾಂಗ್ ನ ಕುಖ್ಯಾತ ಕ್ರಿಮಿನಲ್ ಇಸ್ಸಾಕ್ ಬಂಧಿತ ಆರೋಪಿ. ಇಸ್ಸಾಕ್ ಬಂಧನಕ್ಕಾಗಿ ಪೊಲೀಸರು ಹಿಂಬಾಲಿಸಿದ್ದರು. ಆತ ಮಣಿಪಾಲದಲ್ಲಿ ಯುವತಿಯೊಂದಿಗೆ ಜಾಲಿಯಾಗಿ ಕಾಲಕಳೆಯಲು ಬಂದಿದ್ದ. ಈ ಬಗ್ಗೆ ಮಾಹಿತಿ ಪಡೆದ ಬೆಂಗಳೂರಿನ ನೆಲಮಂಗಲದ ಪೊಲೀಸರು ಮಣಿಪಾಲ್ ಗೆ ತೆರಳಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಇಸಾಕ್, ತನ್ನ ಕಾರಿನಲ್ಲಿ ಪರಾರಿಯಾಗಲ ಯತ್ನಿಸಿದ್ದಾನೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ತಪ್ಪಿಸಿಕೊಳ್ಳಲು ಎರಡು ಕಾರು, ಒಂದು ಬೈಕ್ ಗೆ ತನ್ನ ಕಾರನ್ನು ಡಿಕ್ಕಿ ಹೊಡೆದು ಸರಣಿ ಅಪಘಾತ ಮಾಡಿದ್ದಾನೆ. ಈ ವೇಳೆ ನೆಲಮಂಗಲ ಪೊಲೀಸರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮಣಿಪಾಲ ಪೊಲೀಸರು ಕಾರ್ಯಪ್ರವೃತ್ತರಾಗಿ ಆತನನ್ನು ಹಿಂಬಾಲಿಸಿದ್ದಾರೆ. ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬೆಂಬಿಡದ ಪೊಲಿಸರು ಆತನ ಕಾರನ್ನು ಚೇಸ್ ಮಾಡಿ ಮಣ್ಣಪಳ್ಳದ ಬಳಿ ಇಸ್ಸಾಕ್ ನನ್ನು ಬಂಧಿಸಿದ್ದಾರೆ.