ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ದರ ಮತ್ತೆ ಗಗನಕ್ಕೇರಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆಜಿಗೆ 500 ರಿಂದ 550 ರೂಪಾಯಿ ಇದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಕೆಜಿಗೆ 400 ರಿಂದ 450 ರೂ.ಗೆ ಮಾರಾಟವಾಗಿದೆ.
ಈರುಳ್ಳಿ ಕೆಜಿಗೆ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದ್ದು, ಎಪಿಎಂಸಿಯಲ್ಲಿ 50 ರಿಂದ 60 ರೂಪಾಯಿ ಇದೆ. ಸಾಧಾರಣ ಗುಣಮಟ್ಟದ ಈರುಳ್ಳಿ 40 ರಿಂದ 50 ರೂಪಾಯಿ, ಉತ್ತಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂಪಾಯಿ ದರ ಇದೆ. ಚಿಲ್ಲರೆ ದರ ಇದಕ್ಕಿಂತ 10-20 ರೂಪಾಯಿಯಷ್ಟು ಹೆಚ್ಚಾಗಿದೆ.
ಬೆಳ್ಳುಳ್ಳಿ ದರ ಗಗನಕ್ಕೇರಿದ್ದು, ಕೆಜಿಗೆ 550 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಈರುಳ್ಳಿ, ಬೆಳ್ಳುಳ್ಳಿ ದರ ಏರಿಕೆಯಾಗಿದೆ, ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದೆ. ಮಾರುಕಟ್ಟೆಗೆ ಬರಬೇಕಿದ್ದ ಪೂರ್ಣ ಪ್ರಮಾಣದಷ್ಟು ಈರುಳ್ಳಿ ಮತ್ತು ಬೆಳ್ಳುಳ್ಳಿ ಬರುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.