ನಿಮಗೆ ಗಾರ್ಡನಿಂಗ್ ಎಂದರೆ ವಿಪರೀತ ಇಷ್ಟವೇ? ಕೆಲವು ದಿನಗಳ ಕಾಲ ಮನೆ ಬಿಟ್ಟು ದೂರವಿರಬೇಕಾದ ಸಂದರ್ಭದಲ್ಲಿ ಹೂದೋಟಕ್ಕೆ ನೀರುಣಿಸುವವರು ಯಾರು ಎಂಬ ಚಿಂತೆ ನಿಮ್ಮ ತಲೆ ತಿನ್ನುತ್ತಿದೆಯೇ? ಅದರ ಪರಿಹಾರ ಇಲ್ಲಿದೆ ಕೇಳಿ.
ಒಂದು ಲೀಟರ್ ಇಲ್ಲವೇ ಅದಕ್ಕಿಂತ ದೊಡ್ಡ ನೀರಿನ ಬಾಟಲ್ ತೆಗೆದುಕೊಳ್ಳಿ. ಹನಿ ಹನಿ ನೀರು ಹೊರಗೆ ಹೋಗಬಹುದಾದಷ್ಟು ಸಣ್ಣ ತೂತು ಮಾಡಿ. ಬಾಟಲ್ ತುಂಬ ನೀರು ಹಾಕಿ ಗಿಡದ ಬುಡದಲ್ಲಿಟ್ಟರೆ ನಾಲ್ಕಾರು ದಿನಗಳ ತನಕ ಗಿಡಕ್ಕೆ ನೀರು ದೊರೆಯುತ್ತದೆ.
ಗಿಡಗಳಿಗೆ ಸಾಕೆನಿಸುವಷ್ಟು ನೀರುಣಿಸಿ ತಂಪಾದ ಜಾಗದಲ್ಲಿಟ್ಟು ಹೋದರೆ ವಾರದ ತನಕ ಗಿಡಗಳು ಬಾಡುವುದಿಲ್ಲ. ನೀರನ್ನು ಹೀರಿಟ್ಟುಕೊಳ್ಳುವ ಪಾಟ್ ಗಳು ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಕೋಕೋಪಿಟ್ ನಿಂದ ತಯಾರಾದ ಇವು ನೀರನ್ನು ಹೀರಿಡುತ್ತವೆ, ಗಿಡಗಳು ತಂಪಾಗಿರುತ್ತವೆ.
ಒದ್ದೆಯಾದ ಇಲ್ಲವೇ ಒಣಗಿದ ಎಲೆಯನ್ನು ಗಿಡದ ಸುತ್ತ ಹಾಕಿ ನೀರೆರೆದರೆ ಅದು ಕೂಡಾ ಹಲವು ದಿನಗಳ ಕಾಲ ಒಣಗದೆ ಉಳಿಯುತ್ತದೆ. ಟಬ್ ಗೆ ಸಾಕಷ್ಟು ನೀರು ಹಾಕಿ ಅದರೊಳಗೆ ಪಾಟ್ ಇಟ್ಟರೆ ಕೂಡಾ ಗಿಡ ಒಣಗುವುದಿಲ್ಲ.