
ಬಂಧಿತ ಆರೋಪಿಗಳು ಪ್ರಮುಖ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಮೂಲಕ ದಂಧೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಮುಖ ಸುಳಿವಿನ ಮೇರೆಗೆ ಕಲ್ಲು ಪಾವಯ್ಯ (30) ಮತ್ತು ಧಾಬಾ ಮಾಲೀಕ ಬ್ರಿಜೇಂದ್ರ ತೋಮರ್ (35) ಅವರನ್ನು ಬಂಧಿಸಿ, 20 ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಲ್ಲು ಪಾವಯ್ಯ ವಿಶಾಖಪಟ್ಟಣದಿಂದ ಗ್ವಾಲಿಯರ್, ಭೋಪಾಲ್, ಕೋಟಾ, ಆಗ್ರಾ ಮತ್ತು ದೇಶದ ಇತರ ಪ್ರದೇಶಗಳಿಗೆ, ಪ್ರತಿಷ್ಠಿತ ಅಂತರರಾಷ್ಟ್ರೀಯ ಇ-ಕಾಮರ್ಸ್ ಸಂಸ್ಥೆಯ ಮೂಲಕ ಗಾಂಜಾವನ್ನು ತರುತ್ತಿದ್ದ. ಬ್ರಿಜೇಂದ್ರ ಆತನಿಗೆ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿಗಳ ಬಂಧನದ ನಂತರ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅಮೆಜಾನ್ ವಿರುದ್ಧ ಕೇಂದ್ರ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಇದೀಗ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಗಾಂಜಾ ಕಂಪನಿ ಎಂಬ ಟ್ರೆಂಡಿಂಗ್ ಶುರುವಾಗಿದೆ. ನೆಟ್ಟಿಗರು ಅನೇಕ ಮೀಮ್ಸ್ ಗಳನ್ನು ಸೃಷ್ಟಿಸಿದ್ದಾರೆ. ಅಮೆಜಾನ್ ಮೂಲಕ ಗಾಂಜಾ ದಂಧೆ ಮಾಡಿರುವುದು ನೆಟ್ಟಿಗರಿಗೆ ನಗು ತರಿಸಿದಂತಿದೆ.