ಬೆಂಗಳೂರು: ಆರ್.ಟಿ. ನಗರದ ಖಾಲಿ ನಿವೇಶನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಖಾಲಿ ನಿವೇಶನದಲ್ಲಿ ಕಿಡಿಗೇಡಿಗಳು ಗಾಂಜಾ ಗಿಡಗಳನ್ನು ಬೆಳೆಸಿದ್ದಾರೆ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮನೆಯ ಹಿಂಭಾಗದಲ್ಲೇ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ.
ಆರ್.ಟಿ. ನಗರದ ಮಂಜುನಾಥ ಲೇಔಟ್ ಮುಖ್ಯ ರಸ್ತೆಯಲ್ಲಿರುವ ನಿವೇಶನದಲ್ಲಿ ಗಾಂಜಾ ಗಿಡ ಬೆಳೆಸಲಾಗಿದ್ದು, ಈ ಬಗ್ಗೆ ಬೇಳೂರು ಗೋಪಾಲಕೃಷ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಆರ್.ಟಿ. ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಂಜಾ ಗಿಡಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಖಾಲಿ ನಿವೇಶನದ ಮಾಲೀಕರ ಮಾಹಿತಿಯನ್ನು ಪೊಲೀಸರು ಕಲೆ ಹಾಕ ತೊಡಗಿದ್ದಾರೆ. ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಗರ ಪ್ರದೇಶಗಳಲ್ಲಿ ಗಾಂಜಾ ಬೆಳೆದ ಸ್ಥಳವನ್ನು ಗುರುತಿಸಿ ಪೋಲೀಸ್ ಅಧಿಕಾರಿಗಳಿಗೆ ಬೇಳೂರು ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ಬೆಳೆಯುವುದು ಕೇಳಿ ಬರುತ್ತಿತ್ತು. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಗಾಂಜಾ ಬೆಳೆಯುತ್ತಿರುವುದು ಆಶ್ಚರ್ಯದ ಸಂಗತಿಯೆಂದರೆ ತಪ್ಪಾಗಲಾರದು. ಯುವ ಸಮುದಾಯವನ್ನು ಹಾಳು ಮಾಡುವ ಗಾಂಜಾ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.