ನವದೆಹಲಿ: ಮುಂಬೈನಲ್ಲಿ ನಕಲಿ ಪೊಲೀಸ್ ಎನ್ಕೌಂಟರ್ನಲ್ಲಿ ತನ್ನ ಗೆಳೆಯ, ಗ್ಯಾಂಗ್ಸ್ಟರ್ ಸಂದೀಪ್ ಗಡೋಲಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾಗಿದ್ದ ಮಾಜಿ ರೂಪದರ್ಶಿಯನ್ನು ಗುರುಗ್ರಾಮ್ ಹೋಟೆಲ್ ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ಆಕೆಗೆ ಜಾಮೀನು ದೊರೆತ ಕೆಲವು ತಿಂಗಳ ನಂತರ ಈ ಘಟನೆ ನಡೆದಿದೆ. ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರನ್ನು ಮಂಗಳವಾರ ರಾತ್ರಿ ಐದು ಜನರು ಹೋಟೆಲ್ ಗೆ ಕರೆದೊಯ್ದು ತಲೆಗೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆಕೆಯ ಶವವನ್ನು ಹೋಟೆಲ್ನಿಂದ ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ ಗುರುಗ್ರಾಮ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಡಿಸಿಪಿ ಭೂಪೇಂದರ್ ಸಿಂಗ್ ಸಾಂಗ್ವಾನ್ ಮಾತನಾಡಿ, “ಪಹುಜಾ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.