ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಯುವಕರ ಗುಂಪೊಂದು ಕೋಲು, ದೊಣ್ಣೆ ರಾಡ್ ಗಳಿಂದ ಹೊಡೆದು ಸಾಯಿಸಿದೆ.
ಡಿಸೆಂಬರ್ 31 ರಂದು ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ನಂತರ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರತಾಪ್ ಗಢ ಪೊಲೀಸರು ಮಾಹಿತಿ ನೀಡಿದ್ದಾರೆ.
ಗಂಗಾ ನದಿಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಅವುಗಳ ರಕ್ಷಣೆಗೆ ಒತ್ತು ನೀಡಲಾಗಿದೆ. ಯುವಕರ ಗುಂಪು ಕ್ರೌರ್ಯ ಮೆರೆದಿದ್ದು, ಡಾಲ್ಫಿನ್ ಅನ್ನು ಸುತ್ತುವರೆದು ರಕ್ತ ಚಿಮ್ಮುವಂತೆ ಅದರ ಮೇಲೆ ಬಡಿಗೆ, ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಯಿಂದ ರಕ್ತಸ್ರಾವವಾಗಿ ಡಾಲ್ಫಿನ್ ನಿರ್ಜೀವವಾಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಗಂಗಾ ಡಾಲ್ಫಿನ್ ಸಂರಕ್ಷಿತ ಪ್ರದೇಶದ ಬಳಿ ಸತ್ತು ಬಿದ್ದಿದ್ದ ಡಾಲ್ಫಿನ್ ಅನ್ನು ಗಮನಿಸಿದ್ದಾರೆ. ಗ್ರಾಮಸ್ಥರನ್ನು ವಿಚಾರಿಸಿದಾಗ ಆರಂಭದಲ್ಲಿ ಯಾರೂ ಅದರ ಸಾವಿಗೆ ಕಾರಣವಾದ ಯುವಕರ ಕೃತ್ಯವನ್ನು ಬಹಿರಂಗಪಡಿಸಿರಲಿಲ್ಲ. ಡಾಲ್ಫಿನ್ ತಪಾಸಣೆಯ ವೇಳೆ ಕೊಡಲಿಯಿಂದ ಹಲ್ಲೆ ಮಾಡಿದ ಗಾಯದ ಗುರುತುಗಳು ಕಂಡು ಬಂದಿದ್ದವು. ವಿಡಿಯೋ ವೈರಲ್ ಆದ ನಂತರ ಮೂವರನ್ನು ಬಂಧಿಸಿ ಉಳಿದವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.