ಕೊಪ್ಪಳ : ಕಳೆದ ನವೆಂಬರ್ 25 ರಂದು ಗಂಗಾವತಿಯಲ್ಲಿ ಮುಸ್ಲಿಂ ಸಮುದಾಯದ ಹುಸೇನಸಾಬ ಹಸನಸಾಬ್ ಎಂಬ ವೃದ್ಧನ ಮೇಲೆ ನಡೆದ ಕುರಿತು ಸಂತ್ರಸ್ತ ಹುಸೇನಸಾಬ ಅವರು ನೀಡಿದ ದೂರಿನನ್ವಯ ತನಿಖೆ ನಡೆಸಲಾಗಿದ್ದು, ತನಿಖೆಯಲ್ಲಿ ಸಂತ್ರಸ್ತರಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯ ಮಾಡಿಲ್ಲ ಎಂಬುದು ಸಾಬೀತಾಗಿದ್ದು, ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಸ್ಪಷ್ಟನೆ ನೀಡಿದರು.
ಗಂಗಾವತಿಯಲ್ಲಿ ಕೋಮು ದ್ವೇಷದಿಂದ ವೃದ್ಧನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ವದಂತಿ ಕುರಿತು ಸ್ಪಷ್ಟೀಕರಣ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನವೆಂಬರ್ 25 ರಂದು ಬೆಳಗಿನ ಜಾವ 03 ಗಂಟೆಗೆ ಹುಸೇನಸಾಬ ಹಸನಸಾಬ (65 ವರ್ಷ) ಎಂಬುವವರಿಗೆ ಗಂಗಾವತಿ ಬಸ್ ನಿಲ್ದಾಣದಿಂದ ಯಾರೋ ಇಬ್ಬರು ವ್ಯಕ್ತಿಗಳು ಮೋಟರ್‌ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೆ ಗಡ್ಡಕ್ಕೆ ಬೆಂಕಿ ಹಚ್ಚಿ ಅವರ ಹತ್ತಿರ ಇದ್ದ ರೂ.250 ಗಳನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತರು ನವೆಂಬರ್ 30 ರಂದು ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.243/2023 ಕಲಂ.394, 307 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ಗಂಗಾವತಿ ಡಿ.ವೈಎಸ್‌ಪಿ ಸಿದ್ದಲಿಂಗಪ್ಪಗೌಡ ಅವರ ಮಾರ್ಗದರ್ಶನದಲ್ಲಿ ಗಂಗಾವತಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ ಮಾಳಿ ಅವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 21 ಮರಿಶಾಂತಗೌಡ, ಹೆಚ್.ಸಿ 270 ಚಿರಂಜೀವಿ, ಹೆಚ್.ಸಿ 07 ವಿಶ್ವನಾಥ, ಹೆಚ್.ಸಿ 191 ಸುಭಾಸ ಬಸುದೆ, ಹೆಚ್.ಸಿ 241 ರಾಘವೇಂದ್ರ, ಹೆಚ್.ಸಿ 215 ರಮೇಶ, ಪಿಸಿ 171 ಮೈಲಾರಪ್ಪ, ಪಿಸಿ 164 ಶ್ರೀಶೈಲ, ಚಾಲಕ ಎ.ಎಚ್.ಸಿ 82 ಶಿವಕುಮಾರ ಹಾಗೂ ಜಿಲ್ಲಾ ಪೊಲೀಸ್ ಕಾರ್ಯಾಲಯದ ಹೆಚ್.ಸಿ 36 ಕೋಟೇಶ, ಎ.ಪಿ.ಸಿ ಪ್ರಸಾದ ರವರನ್ನು ಒಳಗೊಂಡ ತಂಡ ರಚಿಸಿ ಸಿಸಿ ಕ್ಯಾಮೆರಾ ಫುಟೇಜ್ ಮತ್ತು ಇನ್ನಿತರ ತಂತ್ರಜ್ಞಾನದ ಮುಖಾಂತರ ಆರೋಪಿತರ ಪತ್ತೆಗಾಗಿ ನಿರಂತರ ಶ್ರಮಿಸಿ ಆರೋಪಿತರಾದ ಗಂಗಾವತಿಯ ಸಾಫ್ಟ್ವೇರ್ ಇಂಜಿನಿಯರ್ ಕೆ.ಸಾಗರ ಜನಾರ್ಧನಶೆಟ್ಟಿ ಕಲ್ಕಿ(24 ವರ್ಷ) ಹಾಗೂ ನರಸಪ್ಪ ಹೊನ್ನಪ್ಪ ದನಕಾಯರ(25 ವರ್ಷ) ಎಂಬುವವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ.
ಅಂಧ ವೃದ್ಧರು ಕತ್ತಲಲ್ಲಿ ಡ್ರಾಪ್ ಮಾಡಲು ಕೇಳಿದ್ದರಿಂದ ಅವರನ್ನು ಮೋಟರ್‌ಬೈಕ್‌ನಲ್ಲಿ ಕರೆದುಕೊಂಡು ಹೋಗುವಾಗ ವೃದ್ಧರ ಟೊಪ್ಪಿಗೆ ಮುಟ್ಟಿದ್ದರಿಂದ ವೃದ್ಧರು ಕೋಪಗೊಂಡು ಅವಾಚ್ಯವಾಗಿ ಬೈದದ್ದರಿಂದ ಅವರನ್ನು ಇಬ್ಬರೂ ಸೇರಿಕೊಂಡು ಪಂಪಾಕ್ರಾಸ್‌ನಲ್ಲಿ ಹೊಡೆದಿದ್ದು, ನಂತರ ಬೀಟ್ ಪೊಲೀಸರು ನೋಡುತ್ತಾರೆಂದು ಇಬ್ಬರೂ ಸೇರಿಕೊಂಡು ಗಂಗಾವತಿಯ ಬೈಪಾಸ್ ರಸ್ತೆಯಲ್ಲಿ ರೈಲ್ವೇ ಬ್ರಿಡ್ಜ್ ಕೆಳಗೆ ಕರೆದುಕೊಂಡು ಹೋಗಿ ವೃದ್ಧರನ್ನು ಹೊಡೆದು ಅವರ ಬಳಿ ಇದ್ದ ರೂ.250 ಗಳನ್ನು ಕಸಿದುಕೊಂಡಿರುವುದಾಗಿ ಆರೋಪಿತರು ತನಿಖೆಯ ವೇಳೆ ಒಪ್ಪಿಕೊಂಡಿರುತ್ತಾರೆ.
ಆದ್ದರಿಂದ ಈ ಪ್ರಕರಣ ಕುಡಿದ ಮತ್ತಿನಲ್ಲಿ ನಡೆದ ಹಲ್ಲೆಯಾಗಿದ್ದು ಬೇರೆ ಯಾವುದೇ ಊಹೆ, ವದಂತಿಗಳು ನಿಜವಲ್ಲ. ಪ್ರಕರಣದ ಆರೋಪಿತರನ್ನು ಬಂಧಿಸಿದ ತನಿಖಾ ವಿಶೇಷ ತಂಡಕ್ಕೆ ಕಾರ್ಯ ಪ್ರಶಂಸನೀಯವಾಗಿದ್ದು, ತಂಡಕ್ಕೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ಮಾಹಿತಿ ತಿಳಿಸಿದರು.
ಈ ಸಂದರ್ಭ ಗಂಗಾವತಿಯ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ, ಗಂಗಾವತಿ ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ ಮಾಳಿ ಹಾಗೂ ತನಿಖಾ ತಂಡದ ಸದಸ್ಯರು ಉಪಸ್ಥಿತರಿದ್ದರು.