ಕೊಪ್ಪಳ: ಐತಿಹಾಸಿಕ ಪ್ರಸಿದ್ಧ ಆನೆಗೊಂದಿಯ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 4 ಮತ್ತು 5 ರಂದು ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
ಅಂತಿಮ ಹಂತದ ಸಿದ್ಧತೆ ಪರಿಶೀಲಿಸಲು ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಜನಸಂದಣಿ ನಿಯಂತ್ರಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಂಘ- ಸಂಸ್ಥೆಗಳ ಸಹಕಾರ ಪಡೆಯಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ಹಾಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಕ್ತರೊಂದಿಗೆ ಶಾಂತಿ ಸಹನೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ಈ ಸಂಬಂಧ ಗಂಗಾವತಿ, ಆನೆಗೊಂದಿ ಮತ್ತು ಸುತ್ತಲಿನ ಸ್ಥಳದಲ್ಲಿ ಶಾಂತಿ ಸಭೆ ನಡೆಸಿ ಸಾರ್ವಜನಿಕ ಸಹಕಾರ ಕೋರಲು ಗಂಗಾವತಿ, ಕೊಪ್ಪಳ ತಹಸೀಲ್ದಾರ್ ಹಾಗೂ ಇನ್ನೀತರ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು:
ಬೆಟ್ಟದ ಸುತ್ತಲಿನ 60 ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕುಡಿಯುವ ನೀರಿಗೆ, ಅಡುಗೆ ಮಾಡಲು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಮಾಡಲು, ಭಕ್ತರು ಬರುವ ದಾರಿಯಲ್ಲಿ ಆಯಾ ಗ್ರಾಪಂನಿಂದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಹಾಯವಾಣಿ
ಯಾರೇ ಇರಲಿ ಹೆಲ್ಪ್ ಡೆಸ್ಕ್ ಸಂಪರ್ಕಿಸಿದರೆ ನೀರು, ಊಟ, ಶೌಚಾಲಯ ಸೇರಿದಂತೆ ನಾನಾ ಸೌಕರ್ಯದ ಮಾಹಿತಿ ಸಕಾಲಕ್ಕೆ ಲಭ್ಯವಾಗುವ ಹಾಗೆ ಸಹಾಯವಾಣಿ ಕೇಂದ್ರ ಸಿದ್ದಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಎಲ್ಲ ವಿಷಯ ಗೊತ್ತಿರುವರನ್ನು ಹೆಲ್ಪಡೆಸ್ಕ್ ಗೆ ನಿಯೋಜಿಸಿ ಎಂದರು.
ಗುಣಮಟ್ಟ ಕಾಯ್ದುಕೊಳ್ಳಿ:
ಅಡುಗೆಗೆ ಗುಣಮಟ್ಟದ ಆಹಾರ ಧಾನ್ಯ ಬಳಸಿ. ಶುಚಿಯಾದ ನೀರು ಬಳಸಿ. ಅಡುಗೆ ಮಾಡುವ ಸ್ಥಳದಲ್ಲಿ ಹಾಗೂ ಸುತ್ತಲಿನ ಸ್ಥಳವು ಶುಚಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಅಡುಗೆ ಮಾಡುವವರು 200, ಸಹಾಯಕರು 50 ಜನ, ಊಟ ಬಡಿಸುವವರು 100 ಸೇರಿ 350 ಜನರನ್ನು ನೇಮಿಸಲಾಗಿದೆ. 18 ಫುಡ್ ಕೌಂಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪೌರ ಕಾರ್ಮಿಕರ ನಿಯೋಜನೆ:
ಗಂಗಾವತಿಯಿಂದ 70, ಕಾರಟಗಿ ಮತ್ತು ಕನಕಗಿರಿಯಿಂದ ತಲಾ 15 ಸೇರಿ 100 ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ತಂಡಗಳನ್ನಾಗಿ ರಚಿಸಿ ಅಡುಗೆ, ಪಾರ್ಕಿಂಗ್, ಬೆಟ್ಟದ ಮೇಲೆ ಮತ್ತು ಇನ್ನೀತರ ಕಡೆ ನಿಯೋಜಿಸಲಾಗಿದೆ. ಬೆಟ್ಟದ ಸ್ಥಳಕ್ಕೆ ಲಕ್ಷಗಟ್ಟಲೇ ಜನರು ಬಂದು ಹೋಗುವುದರಿಂದ ವಾಹನ ಸಮೇತ ಪೌರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬೆಟ್ಟದ ಸ್ಥಳ ಸಿಸಿಟಿವಿ ಕಣ್ಗಾವಲಿನಲ್ಲಿ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಮಾತನಾಡಿ, ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಗಂಗಾವತಿ ಸಿಟಿ ಮತ್ತು ಬೆಟ್ಟದ ಸುತ್ತಲಿನ ಸ್ಥಳವನ್ನು ಸಿಸಿಟಿವಿ ಕ್ಯಾಮರಾದ ಕಣ್ಗಾವಲಿನಲ್ಲಿಡಲು ವ್ತವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಮೊದಲೇ ತಿಳಿಸಿದಂತೆ ಭಕ್ತರು ಬೆಟ್ಟಕ್ಕೆ ಬರುವ ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೈಟ್ ಹಾಕಿಸುವ ವ್ಯವಸ್ಥೆ ಮಾಡಬೇಕು. ಅಗ್ನಿಶಾಮಕ ಅಧಿಕಾರಿಗಳು ಎರಡು ದಿನಗಳ ಕಾಲ ಸ್ಥಳದಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜೇನಕೊಪ್ಪ, ಗಂಗಾವತಿ ತಹಸೀಲ್ದಾರ್ ಹಾಗೂ ಇನ್ನಿತರರು ಇದ್ದರು.