
ಮರದ ಪೆಟ್ಟಿಗೆಯಲ್ಲಿದ್ದ ಹೆಣ್ಣು ಹಸುಗೂಸು ಘಾಜಿಯಾಪುರದಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದಿದೆ. ಉತ್ತರ ಪ್ರದೇಶ ಸರ್ಕಾರವು ಮಗುವಿನ ಸಂಪೂರ್ಣ ಜವಾಬ್ದಾರಿಯನ್ನ ನೋಡಿಕೊಳ್ಳಲು ನಿರ್ಧರಿಸಿದೆ. ನದಿಯಲ್ಲಿ ತೇಲುತ್ತಿದ್ದ ಮಗುವನ್ನ ಅಂಬಿಗ ಕಾಪಾಡಿದ್ದು ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಂಬಿಗನ ಈ ಮಾನವೀಯತೆಯನ್ನ ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವರಿಗೆ ಮನೆ ಸೌಕರ್ಯವನ್ನ ಒದಗಿಸಲಿದೆ.
ಅಲ್ಲದೇ ಅವರಿಗೆ ಯೋಗ್ಯವಾದ ಯೋಜನೆ ಮೂಲಕವೂ ಅನುದಾನವನ್ನ ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ರು.
ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ದಾದ್ರಿ ಘಾಟ್ನಲ್ಲಿ ಮಗುವಿನ ಅಳು ಶಬ್ದ ಕೇಳಿದ ಅಂಬಿಗ ಹುಡುಕಾಟ ಶುರು ಮಾಡುತ್ತಿದ್ದಂತೆ ಅವನಿಗೆ ಮರದ ಪೆಟ್ಟಿಗೆಯೊಂದು ಕಂಡು ಬಂದಿತ್ತು. ಈ ಪೆಟ್ಟಿಗೆಯಲ್ಲಿ ದೇವಿಯ ಫೋಟೊ ಹಾಗೂ ಮಗುವಿನ ಜಾತಕವನ್ನೂ ಇಡಲಾಗಿತ್ತು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಪೊಲೀಸರು ಮಗುವನ್ನ ಆಶಾ ಜ್ಯೋತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಗುವನ್ನ ಆಸ್ಪತ್ರೆಗೆ ಸೇರಿಸಿ ಆರೋಗ್ಯ ತಪಾಸಣೆ ಮಾಡಲಾಗಿದೆ . ಈ ಮಗುವಿಗೆ ಗಂಗಾ ಎಂದು ನಾಮಕರಣ ಮಾಡಲಾಗಿದೆ.