ಲಖ್ನೋ: ‘ತ್ರಿವಳಿ ತಲಾಖ್’ ನಂತರವೂ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಮತ್ತು ಆತನ ಸಹೋದರ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಉತ್ತರ ಪ್ರದೇಶದ ಶಹಜಹಾನ್ ಪುರದ ಪೊಲೀಸರು ಹೇಳಿದ್ದಾರೆ.
ಪೊಲೀಸರು ಇಬ್ಬರು ಸೋದರರು ಮತ್ತು ಧರ್ಮಗುರು ಸೇರಿದಂತೆ ಇತರ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಅವರನ್ನು ಸಹ ಆರೋಪಿಗಳೆಂದು ಗುರುತಿಸಲಾಗಿದೆ.
ಮಹಿಳೆಯ ಮೊಕದ್ದಮೆ ಪ್ರಕಾರ, ಅವರು ಐದು ವರ್ಷಗಳ ಹಿಂದೆ ಸಲ್ಮಾನ್ ಅವರನ್ನು ವಿವಾಹವಾದರು. ಕಾನೂನುಬಾಹಿರವಾದ “ತ್ರಿವಳಿ ತಲಾಖ್” ವಿಧಾನವನ್ನು ಬಳಸಿಕೊಂಡು ಸಲ್ಮಾನ್ ಕೆಲವು ತಿಂಗಳ ಹಿಂದೆ ವಿಚ್ಛೇದನ ನೀಡಿದ್ದ.
ಒಬ್ಬ ಧರ್ಮಗುರು, ಹಾಜಿಯ ಸಲಹೆಯ ಮೇರೆಗೆ ಅವಳು ತನ್ನ ಕಿರಿಯ ಸಹೋದರನ ಮದುವೆಯಾಗಿ ಆತನಿಗೆ ವಿಚ್ಛೇದನ ನೀಡಿದರೆ ಅವಳನ್ನು ತನ್ನ ಹೆಂಡತಿಯಾಗಿ ಮತ್ತೆ ಸ್ವೀಕರಿಸುತ್ತೇನೆ ಎಂದು ಸಲ್ಮಾನ್ ಮಹಿಳೆಗೆ ಮನವೊಲಿಸಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಅವರು ಹೇಳಿದಂತೆ ಕೇಳಿದರೂ, ಕಿರಿಯ ಸಹೋದರ ಅವಳಿಗೆ ವಿಚ್ಛೇದನ ನೀಡಲು ನಿರಾಕರಿಸಿದ್ದ. ನಂತರದಲ್ಲಿ ಇಬ್ಬರೂ ಸಹೋದರರು ಅವಳ ಮೇಲೆ ಅತ್ಯಾಚಾರ ಎಸಗುತ್ತಿದ್ದರು.
ಸಲ್ಮಾನ್ ಭರವಸೆಯ ಮೇರೆಗೆ ಮಹಿಳೆ ಆತನ ಸಹೋದರ ಇಸ್ಲಾಂನನ್ನು ಮದುವೆಯಾಗಿದ್ದು, ಆದರೆ ಆತ ಆಕೆಗೆ ವಿಚ್ಛೇದನ ನೀಡಲು ನಿರಾಕರಿಸಿದ. ಅಂದಿನಿಂದ, ಸಲ್ಮಾನ್ ಮತ್ತು ಇಸ್ಲಾಂ ಇಬ್ಬರೂ ಹಲವಾರು ಸಂದರ್ಭಗಳಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಉಲ್ಲೇಖಿಸಿದ್ದಾರೆ.
ಮಹಿಳೆ ಸ್ಥಳೀಯ ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಸೋಮವಾರ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನ ಆಧಾರದ ಮೇಲೆ ನಾವು ಗುಡ್ಡು ಹಾಜಿ, ಸಲ್ಮಾನ್, ಇಸ್ಲಾಂ ಮತ್ತು ಅವರ ಕುಟುಂಬದ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಹೇಳಿಕೆ ನೀಡಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಮೊದಲು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಲಾಯಿತು. ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.