![](https://kannadadunia.com/wp-content/uploads/2023/08/chite-.jpg)
ಜೈಪುರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ಘೋರ ಘಟನೆ ರಜಸ್ಥಾನದ ಭಿಲ್ವಾರಾದಲ್ಲಿ ನಡೆದಿದೆ. 12 ವರ್ಷದ ಮಗಳ ಮೇಲೆ ಕಾಮುಕರ ಅಟ್ಟಹಾಸ, ಕೊಲೆ ಘಟನೆಯಿಂದ ಮನನಿಂದ ತಂದೆ ಮಗಳ ಚಿತೆಗೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾರೆ.
ಮಗಳ ಮೇಲೆ ಕಾಮುಕರು ಅಟ್ಟಹಾಸ ಮೆರೆದಿರುವ ವಿಚಾರವನ್ನು ಒಪ್ಪಿಕೊಳ್ಳಲು ತಂದೆಗೆ ಸಾಧ್ಯವಾಗುತ್ತಿರಲಿಲ್ಲ, ವಿಷಯ ಕೇಳಿ ತೀವ್ರವಾಗಿ ನೊಂದಿದ್ದ ತಂದೆಗೆ ಆಕೆ ಸಾವನ್ನಪ್ಪಿರುವ ಸುದ್ದಿಯು ಬರಸಿಡಿಲಿನಂತೆ ಬಂದೆರಗಿದೆ. ಸುದ್ದಿ ತಿಳಿದು ಆಘಾತಕ್ಕೊಳಗಾದ ತಂದೆ ಮಗಳ ಅಂತ್ಯಕ್ರಿಯೆಯ ವೇಳೆ ಆಕೆಯ ಉರಿಯುತ್ತಿರುವ ಚಿತೆಗೆ ಹಾರಿದ್ದಾರೆ.
ತಕ್ಷಣ ಕುಟುಂಬದ ಇತರ ಸದಸ್ಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಅವರನ್ನು ಮಹಾತ್ಮಾ ಗಾಂಧಿ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಗಸ್ಟ್ 2ರಂದು ನಾಪತ್ತೆಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಬಯಲಾಗಿತ್ತು. ಕೆಲ ದಿನಗಳಲ್ಲೇ ಆಕೆಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಕಲ್ಲಿದ್ದಲು ಕುಲುಮೆ ಬಳಿ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೆ.