ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಎಲ್ಲಾ ಅತ್ಯಾಚಾರ ಪ್ರಕರಣಗಳ ಆರೋಪಿಗಳ ವಿರುದ್ಧವೂ ಸೆಕ್ಷನ್ ಹಾಕಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ನಡೆದಿರುವ ಎಲ್ಲಾ ಅತ್ಯಾಚಾರ ಪ್ರಕರಣಗಳನ್ನು ಎಸ್ ಐ ಟಿ ತನಿಖೆಗೆ ನೀಡಲಿ. ಆರೋಪಿಗಳ ವಿರುದ್ಧ ಸೆಕ್ಷನ್ ಹಾಕಿ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಹಾಗೂ ಅತ್ಯಾಚಾರ ಪ್ರಕರಣದ ಬಗ್ಗೆ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಚಾರ್ಜ್ ಶೀಟ್ ಸಲ್ಲಿಸಲಿ. ರಾಜ್ಯದಲ್ಲಿನ ಸಾಮೂಹಿಕ ಅತ್ಯಾಚಾರ ನಡೆದಿರುವ ಎಲ್ಲಾ ಕೇಸ್ ಗಳನ್ನು ಎಸ್ ಐಟಿ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಯಾವ ರೀತಿ ಯೋಚಿಸುತ್ತದೆ ಅದೇ ರೀತಿ ಪೊಲೀಸರು ಕೆಲಸ ಮಾಡುತ್ತಾರೆ. ಯುವಕರು ನೈತಿಕ ಪೊಲೀಸ್ ಗಿರಿ ಮಾಡಿದ್ದಲ್ಲದೇ ಯುವತಿಯನ್ನು ಥಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಗ್ಯಾಂಗ್ ರೇಪ್ ಮುಚ್ಚಿಡಲು ಪೊಲೀಸರು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ 6 ಜನರಲ್ಲಿ ಇನ್ನೂ ಮೂರು ಜನರು ಅರೆಸ್ಟ್ ಆಗಿಲ್ಲ. ಗೃಹ ಸಚಿವರು ಸ್ಟ್ಯಾಂಡರ್ಡ್ ಇನ್ ಸ್ಟ್ರಕ್ಷನ್ ಕೊಟ್ಟಿದ್ದೇವೆ ಎಂದಿದ್ದಾರೆ. ಸಮುದಾಯಗಳನ್ನು ನೋಡಿ ಕೇಸ್ ಹಾಕಿ ಅಂತ ನೀವು ಸ್ಟ್ಯಾಂಡರ್ಡ್ ಇನ್ ಸ್ಟ್ರಕ್ಷನ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ನಾಳೆ ಮಹಿಳಾ ಆಯೋಗ ಹಾಗೂ ಬಿಜೆಪಿ ನಿಯೋಗ ಹಾನಗಲ್ ಗೆ ಭೇಟಿ ನೀಡಲಿದೆ. ರಾಜ್ಯದಲ್ಲಿ ಸಂಭವಿಸಿರುವ ಪ್ರಕರಣಗಳ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.