ಹಾವೇರಿ : ಜಿಲ್ಲೆಯ ಹಾನಗಲ್ ನಲ್ಲಿ ಮುಸ್ಲಿಂ ಮಹಿಳೆ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 7 ಕ್ಕೇರಿಕೆಯಾಗಿದೆ.
ಬಂಧಿತರನ್ನು ಸಾದಿಕ್ ಆಗಸಿಮನಿ, ನಿಯಾಜ್ ಅಹಮದ್ ಮುಲ್ಲಾ ಎಂದು ಗುರುತಿಸಲಾಗಿದೆ, ಸದ್ಯ 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ನೈತಿಕ ಪೊಲೀಸ್ ಗಿರಿ ನಡೆಸಿದ ಬಳಿಕ ಯುವಕರ ಗುಂಪು ಮುಸ್ಲಿಂ ಮಹಿಳೆಯನ್ನು ಎಳೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ಥ ಮಹಿಳೆ ದೂರು ದಾಖಲಿಸಿದ್ದರು.
ಅಪರಾಧ ನಡೆದ ಸ್ಥಳಕ್ಕೆ ಪೊಲೀಸರು ಶುಕ್ರವಾರ ಮತ್ತು ಶನಿವಾರ ಸಂತ್ರಸ್ತೆಯನ್ನು ಕರೆದೊಯ್ದಿದ್ದರು, ದಾವಣಗೆರೆಯ ಎಫ್ಎಸ್ಎಲ್ ತಂಡವು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಮೊದಲ ಸ್ಥಳದಲ್ಲಿ ಸಂತ್ರಸ್ತೆಯ ಒಳ ಉಡುಪುಗಳನ್ನು ಪತ್ತೆ ಮಾಡಿತ್ತು. ಹಾನಗಲ್ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಮೂರು ಹಲವು ಸ್ಥಳಗಳಲ್ಲಿ ಆರೋಪಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಳು.