ತಿರುಪತಿ: ದೇಶದಲ್ಲಿ ವೆಂಕಟೇಶ್ವರಸ್ವಾಮಿಗೆ ಅತೀ ಹೆಚ್ಚು ಭಕ್ತರಿದ್ದಾರೆ. ತಿಮ್ಮಪ್ಪನ ದರ್ಶನ ಎಂದರೆ ಸಾಕು ಅವರಿಗೆ ಅಂಗೈಯಲ್ಲಿಯೇ ಸ್ವರ್ಗ ಸಿಕ್ಕಷ್ಟು ಖುಷಿಯಾಗುತ್ತದೆ. ಆದರೆ, ತಿಮ್ಮಪ್ಪನ ದರ್ಶನದ ಹೆಸರಿನಲ್ಲಿ ಅವರ ಭಕ್ತರನ್ನು ಮೋಸಗೊಳಿಸುತ್ತಿರುವ ಸಂಗತಿ ಬಯಲಿಗೆ ಬಂದಿದೆ.
ತಿಮ್ಮಪ್ಪನ ದರ್ಶನಕ್ಕಾಗಿ ವಿಶೇಷ ದರ್ಶನದ ಟಿಕೆಟ್ ಗಳನ್ನು ಕೂಡ ಟಿಟಿಡಿ ನೀಡುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಕೆಲವರು ಈ ಟಿಕೆಟ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹೀಗೆ ದೇವಸ್ಥಾನದ ಒಳಗೆ ಹೋಗುತ್ತಿದ್ದ ಭಕ್ತರ ಟಿಕೆಟ್ ಗಮನಿಸಿ, ವಿಚಾರಿಸಿದಾಗ ಈ ಸಂಗತಿ ಬಯಲಿಗೆ ಬಂದಿದೆ.
ತೆಲಂಗಾಣದ ಭಕ್ತರೊಬ್ಬರಿಗೆ 300 ರೂಪಾಯಿ ಮುಖ ಬೆಲೆಯ ಟಿಕೆಟ್ ನ್ನು 3,300 ರೂ.ಗೆ ಮಾರಾಟ ಮಾಡಲಾಗಿತ್ತು. ಈ ಟಿಕೆಟ್ ಗಳನ್ನು ಪಡೆದು ಭಕ್ತರು ದರ್ಶನಕ್ಕೆ ಬಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಲ ಪೊಲೀಸ್ ಠಾಣೆಯಲ್ಲಿ 7 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಅಲ್ಲದೇ, ಇನ್ನೊಂದು ಪ್ರಕರಣದಲ್ಲಿ ಇದೇ 300 ರೂ. ಮುಖ ಬೆಲೆಯ ವಿಶೇಷ ದರ್ಶನದ ಟಿಕೆಟ್ ನ್ನು 7 ಸಾವಿರ ರೂ. ಗೆ ಮಾರಾಟ ಮಾಡಲಾಗಿತ್ತು. ಇವು ಕೂಡ ನಕಲಿ ಎಂಬುವುದು ತಿಳಿದು ಬಂದಿತ್ತು. ಮಧ್ಯವರ್ತಿ ಹಾಗೂ ಟಿಟಿಡಿ ಸಿಬ್ಬಂದಿಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ, ಎ. ಕೃಷ್ಣರಾವ್, ಅರುಣ್, ಬಾಲಾಜಿ ಸೇರಿದಂತೆ 7 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.