ಬೆಂಗಳೂರು: ಗಣೇಶ ಕಾಲ್ಪನಿಕ ದೇವರು, ಪೂಜೆ ಮಾಡುವ ಅಗತ್ಯವಿಲ್ಲ ಎಂದು ಕೆಲ ದಿನಗಳ ಹಿಂದೆ ವಿವಾದಿತ ಹೇಳಿಕೆ ನೀಡಿದ್ದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ಹಿಂದೂ ಪರ ಹೋರಾಟಗಾರ ಪ್ರಶಾಂತ್ ಸಂಬರಗಿ ದೂರು ದಾಖಲಿಸಿದ್ದಾರೆ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿರುವ ಪ್ರಶಾಂತ್ ಸಂಬರಗಿ ಅವರು, ಪಂಡಿತಾರಾಧ್ಯ ಶ್ರೀಗಳು ಕೋಟ್ಯಂತರ ಜನರ ಆರಾಧ್ಯದೈವವಾಗಿರುವ ಗಣೇಶನ ವಿರುದ್ಧ ಮಾತನಾಡಿದ್ದಾರೆ. ಸಮಾಜದ ಒಂದು ವರ್ಗವನ್ನು ಓಲೈಸುವ ಭರದಲ್ಲಿ, ದೇಶದ ಬಹುಸಂಖ್ಯಾತರ ಆರಾಧನೆಯ, ನಂಬಿಕೆಯ ಕೇಂದ್ರ ಬಿಂದುವಾಗಿರುವ, ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಗಣಪತಿ ದೇವರ ಕುರಿತು ಅತ್ಯಂತ ಕೀಳು ಹೇಳಿಕೆ ನೀಡಿದ್ದಾರೆ. ಇದು ಸರ್ವಧರ್ಮೀಯರು ಪೂಜಿಸುವ ಗಣೇಶನ ಭಕ್ತವರ್ಗದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರ ಸ್ಥಾನ ಪಡೆದಿರುವ ವಿಘ್ನ ನಿವಾರಕನ ಬಗ್ಗೆ, ಹಾಗೂ ಹಿಂದೂ ಧರ್ಮದ ನಂಬಿಕೆಗಳನ್ನು ಅವಹೇಳನ ಮಾಡಿದ್ದು, ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಕುಂದುಂಟಾಗಿದೆ. ಸಾರ್ವಜನಿಕವಾಗಿ ಹೀಗೆ ಹಿಂದೂ ದೇವರ ವ್ಯಂಗ್ಯದ ಹಿಂದೆ ಸಮಾಜದ ಸಾಮರಸ್ಯಕ್ಕೆ ಹಾಳು ಮಾಡುವ ಕುತಂತ್ರ ಅಡಗಿರುವುದು ಸ್ಪಷ್ಟ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಗಣೇಶನ ಆರಾಧನೆ, ಆರಾಧಕರ ಆಚಾರ ವಿಚಾರಗಳ ಬಗ್ಗೆ ಸಾಣೇಹಳ್ಳಿ ಸ್ವಾಮೀಜಿಯವರು ನಿಂದಿಸಿರುವುದೂ ಅಕ್ಷಮ್ಯ. ಹಿಂದೂ ದಾರ್ಮಿಕ ಆಚರಣೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಬಹಿರಂಗವಾಗಿಯೇ ನೀಡಿದ್ದು, ಹಿಂದೂಗಳ ಭಾವನೆಯನ್ನು ಕೆರಳಿಸಲು ಹೊರಟಿರುವ ಸಾಣೇಹಳ್ಳಿ ಸ್ವಾಮೀಜಿಯವರ ವಿರುದ್ಧ 295 ಎ ಅಡಿಯಲ್ಲಿ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೇಳಿಕೆ ಹಿಂಪಡೆಯಲಿ
ದೂರು ದಾಖಲಿಸಿದ ಬಳಿಕ ಮಾತನಾಡಿದ ಪ್ರಶಾಂತ್ ಸಂಬರಗಿ, ಕೇವಲ ಕಾವಿ ಬಟ್ಟೆ ಹಾಕಿದ ಮಾತ್ರಕ್ಕೆ ಸಾಧು ಸಂತರಾಗುವುದಿಲ್ಲ. ಹಿಂದೂ ಎನ್ನುವುದು ಭಾರತ ಭೂಮಿಯಲ್ಲಿ ಹುಟ್ಟಿರುವ ಸನಾತನ ಧರ್ಮ. ಹಿಂದೂಗಳು ಗಲಾಟೆ ಮಾಡುವುದಿಲ್ಲ. ತಲೆ ಕತ್ತರಿಸಿ ಎನ್ನುವುದಿಲ್ಲ, ಫತ್ವಾ ಹೊರಡಿಸುವುದಿಲ್ಲ ಎನ್ನುವ ಕಾರಣಕ್ಕೆ, ಈ ವ್ಯಕ್ತಿ ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕಾನೂನು ಪ್ರಕಾರ, ಧರ್ಮ ನಿಂದನೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಲ್ಲಿ ಅವರ ವಿರುದ್ಧ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜಕೀಯಕ್ಕಾಗಿ ಬರುವುದಾದರೆ ಸ್ವಾಮೀಜಿಗಳು ಬರಲಿ. ಆದರೆ ರಾಜಕೀಯ ಲಾಭ ಪಡೆಯುವುದಕ್ಕಾಗಿ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡುವುದನ್ನು ಬಿಡಲಿ. ರಾಜ್ಯದಲ್ಲಿರುವ ಲಿಂಗಾಯತರ ಮನೆಯಲ್ಲಿ ಗಣೇಶನ ಆರಾಧನೆಯಾಗುತ್ತದೆ. ಅದನ್ನೇ ಸ್ವಾಮೀಜಿಗಳು ಅರ್ಥ ಮಾಡಿಕೊಂಡಿಲ್ಲ ಎಂದಿದ್ದಾರೆ.