ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಡಿಬಿಡಿ- ಗೊಂದಲದಿಂದಾಗಿ ಎಡವಟ್ಟಿನಿಂದ ಬಂಗಾರದ ಸರದ ಸಮೇತ ಮೂರ್ತಿ ವಿಸರ್ಜನೆ ಮಡಿರುವ ಘಟನೆ ಬೆಂಗಳೂರಿನ ದಾಸರಹಳ್ಳಿ ಸಮೀಪದ ಬಿ.ಆರ್.ಐ ಕಾಲೋನಿಯಲ್ಲಿ ನಡೆದಿದೆ.
ಗಣೇಶ ಹಬ್ಬದಲ್ಲಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಗಣೇಶ ಮೂರ್ತಿಗೆ 65 ಗ್ರಾಂ ಚಿನ್ನದ ಸರ ಹಾಕಿ ಪೂಜಿಸಲಾಗಿತ್ತು. ಆದರೆ ಮೂರ್ತಿ ವಿಸರ್ಜನೆ ವೇಳೆ ಚಿನ್ನದ ಸರ ತೆಗೆಯಲು ಯುವಕರ ಗುಂಪು ಮರೆತಿದೆ. ಚಿನ್ನದ ಹಾರದ ಸಮೇತ ಗಣೇಶ ಮೂರ್ತಿಯನ್ನು ಯುವಕರ ಗುಂಪು ವಿಸರ್ಜನೆ ಮಾಡಿದೆ. ಮೂರ್ತಿ ವಿಸರ್ಜನೆ ಬಳಿಕ ಚಿನ್ನದ ಸರ ಇರುವುದು ನೆನಪಾಗಿದೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಈ ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಗಿದೆ. ಬಳಿಕ ರಾತ್ರಿ 10 ಗಂಟೆ ವೇಳೆಗೆ ಯುವಕರಿಗೆ ಚಿನ್ನದ ಸರದ ನೆನಪಾಗಿದೆ. ತಕ್ಷಣ ಟ್ರಕ್ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಟ್ರಕ್ ನೀರನ್ನು ಖಾಲಿ ಮಾಡಿದ್ದ ಜಾಗದಲ್ಲಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಿನಲ್ಲಿ ಯುವಕರು ರಾತ್ರಿಯಿಡಿ ಚಿನ್ನದ ಸರಕ್ಕಾಗಿ ಹುಡುಕಾಡಿದ್ದಾರೆ. ಬೆಳಗಿನ ಜಾವ ಚಿನ್ನದ ಸರ ಸಿಕ್ಕಿದೆ. 65 ಗ್ರಾಂ ಚಿನ್ನದ ಸರ ಸದ್ಯ ಸಿಕ್ಕಿತಲ್ಲ ಎಂದು ಯುವಕರು ನಿಟುಸಿರು ಬಿಟ್ಟಿದ್ದಾರೆ.