ಬೆಂಗಳೂರು: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದ್ದು, ಪರಿಸರಕ್ಕೆ ಪೂರಕವಾಗಿ ಗಣೇಶ ಹಬ್ಬ ಆಚರಿಸಲು ಬಿಬಿಎಂಪಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಬೆಂಗಳೂರಿನ 63 ಸ್ಥಳಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಗಣೇಶ ಮೂರ್ತಿಯ ತಯಾರಿಕೆಗೆ ರಾಸಾಯನಿಕ ಬಣ್ಣ, ಥರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಳನ್ನು ಬಳಸಬಾರದು. ಈ ರೀತಿಯ ವಸ್ತುಗಳನ್ನು ಬಳಸಿ ತಯಾರಿಸುವ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗುದು.
ಹಬ್ಬ ಆಚರಣೆಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಪಾಲಿಕೆಯ ಸಂಸ್ಕರಣಾ ಘಟಕಗಳಿಗೆ ಸಂಸ್ಕರಣೆಗಾಗಿ ಕಳುಹಿಸಲು ಮತ್ತು ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಕಾರ್ಯಕ್ರಮ ಆಯೋಜಿಸುವ ಸಂಬಂಧ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗಳನ್ನು ಒಳಗೊಂಡಂತೆ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರಗಳ ಮೂಲಕ ಪೂರ್ವಾನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.