ಬೆಂಗಳೂರು: ಬ್ಯಾಡಗಿ ಮತ್ತು ಹೊನ್ನಾಳಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಹಳೆಶಿಡನೂರು ಗ್ರಾಮದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಶುಕ್ರವಾರ ಬೆಳಗಿನ ಜಾವ ಕಳವು ಮಾಡಲಾಗಿದೆ. ಕಲ್ಮೇಶ್ವರ ಯುವಕ ಮಂಡಲದ ವತಿಯಿಂದ ಬಸವೇಶ್ವರ ದೇವಾಲಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಯುವಕರು ನಿದ್ದೆಗೆ ಜಾರಿದ ಸಂದರ್ಭದಲ್ಲಿ ಬೆಳಗಿನ ಜಾವ ಕಳ್ಳರು ಗಣೇಶ ಮೂರ್ತಿಯನ್ನು ಕದ್ದೊಯ್ದಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕೆನರಾ ಬ್ಯಾಂಕ್ ಸಮೀಪ ಯುವಕರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಕಿಡಿಗೇಡಿಗಳು ಹೊತ್ತುಕೊಂಡು ಹೋಗಿದ್ದಾರೆ. ಬುಧವಾರ ತಡರಾತ್ರಿವರೆಗೂ ಯುವಕರು ಪೂಜೆ ಪುನಸ್ಕಾರ ಮುಗಿಸಿ ರಾತ್ರಿ ಒಂದು ಗಂಟೆಗೆ ಮನೆಗೆ ತೆರಳಿದ್ದಾರೆ. ಈ ವೇಳೆಯಲ್ಲಿ ಕಿಡಿಗೇಡಿಗಳು ಗಣಪತಿ ಮೂರ್ತಿ ಹೊತ್ತುಕೊಂಡು ಪರಾರಿಯಾಗಿದ್ದಾರೆ.