ಬೆಂಗಳೂರು: ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಸಡಗರ-ಸಂಭ್ರಮ ಮನೆ ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ರೀತಿಯ ಗಣಪತಿ ಮೂರ್ತಿ ಗಮನ ಸೆಳೆಯುತ್ತಿದೆ. ಅದರಲ್ಲಿ ಸತ್ಯಸಾಯಿ ಗಣಪತಿ ದೇವಾಲಯವನ್ನು ನೋಟು ಹಾಗೂ ಕಾಯಿನ್ ಗಳಿಂದಲೇ ಅಲಂಕರಿಸಿರುವುದು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದೆ.
ಬೆಂಗಳೂರಿನ ಪುಟ್ಟೇನಹಳ್ಳಿಯ ಸತ್ಯಸಾಯಿ ಗಣಪತಿ ದೇವಾಲಯದಲ್ಲಿ ಬರೋಬ್ಬರಿ 2 ಕೋಟಿಗೂ ಹೆಚ್ಚು ನೋಟು, 50 ಲಕ್ಷ ರೂಪಾಯಿ ನಾಣ್ಯಗಳಿಂದ ವಿನಾಯಕನನ್ನು ಸಿಂಗರಿಸಲಾಗಿದ್ದು, ವಿಶೇಷ ಅಲಂಕಾರ ಕಂಡು ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಡೀ ದೇವಾಲಯವನ್ನು 10, 20, 50, 100, 200, 500, 2000 ರೂಪಾಯಿಗಳ ನೋಟುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದು, ನೋಟಿನ ಬಣ್ಣಗಳಿಗೆ ಅನುಗುಣವಾಗಿ ಹಾರಗಳನ್ನು ಮಾಡಲಾಗಿದೆ. ನೋಟಿನ ಹಾರಗಳನ್ನು ಕಲಾತ್ಮಕವಾಗಿ ಅಳವಡಿಸಲಾಗಿದ್ದು, ಈ ಅದ್ಭುತ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು.
ನೋಟು, ನಾಣ್ಯಗಳಿಂದಲೇ ಅಲಂಕೃತವಾಗಿರುವ ದೇವಾಲಯಕ್ಕೆ 22 ಸಿಸಿಟಿವಿ ಕ್ಯಾಮರಾ ಕಣ್ಗಾವಲು ಹಾಕಲಾಗಿದೆ. ಅಲ್ಲದೇ ಗನ್ ಮ್ಯಾನ್, ಸೆಕ್ಯುರಿಟಿ ಸಿಬ್ಬಂದಿಗಳಿಂದ ಭದ್ರತೆಯನ್ನು ಕಲ್ಪಿಸಲಾಗಿದೆ.
ಗಣಪತಿ ಹಾಗೂ ದೇವಾಲಯವನ್ನು ನೋಟು, ಕಾಯಿನ್ ಗಳಿಂದ ಅಲಂಕರಿಸಲಾಗಿರುವುದರ ಜೊತೆಗೆ ಚಂದ್ರಯಾನ-3, ಜೈ ಕರ್ನಾಟಕ, ಜೈ ಜವಾನ್, ಜೈ ಕಿಸಾನ್, ಮೇರಾ ಭಾರತ್ ಮಹಾನ್ ಥೀಮ್ ಅಳವಡಿಕೆ ಮಾಡಲಾಗಿದೆ. ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಈ ವೈಭವದ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ದೇವಾಲಯಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.