ಹಿಂದೂಗಳ ಪವಿತ್ರ ಹಬ್ಬವಾದ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ, ಹಬ್ಬದ ಮಾರ್ಗಸೂಚಿ ಹೊರಡಿಸಿರುವ ಬಿಬಿಎಂಪಿ ಶುಕ್ರವಾರದಂದು ಬೆಂಗಳೂರಿನಲ್ಲಿ ಪ್ರಾಣಿ ಬಲಿ ಹಾಗೂ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಿದೆ.
ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟಿರುವ ಬಿಬಿಎಂಪಿ ಸಾರ್ವಜನಿಕ ಗಣೇಶೋತ್ಸವವನ್ನು ಐದು ದಿನಗಳ ಬದಲಾಗಿ ಮೂರು ದಿನಗಳ ಕಾಲ ಆಚರಣೆ ಮಾಡುವಂತೆ ಹೇಳಿದೆ.
ಬೆಂಗಳೂರು ನಗರದಲ್ಲಿ ಮೂರು ದಿನಗಳಿಗಿಂತ ಹೆಚ್ಚು ಸಮಯ ಗಣೇಶೋತ್ಸವ ಆಚರಿಸುವಂತಿಲ್ಲ. ಗಣೇಶ ಮೂರ್ತಿ ಮುಳುಗಿಸುವ ವೇಳೆ ಯಾವುದೇ ರೀತಿಯ ಮೆರವಣಿಗೆ ಮಾಡುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಪರಿಸರ ಸ್ನೇಹಿ ಗಣೇಶೋತ್ಸವಕ್ಕೂ ಒತ್ತು ನೀಡಿರುವ ಪಾಲಿಕೆಯು ಪಿಒಪಿ ಗಣೇಶ ಮೂರ್ತಿಗೆ ನಿರ್ಬಂಧ ಹೇರಿದೆ. ಭಕ್ತರು ನೈಸರ್ಗಿಕ ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಹಾಗೂ ಮನೆಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಬಕೆಟ್ಗಳಲ್ಲಿ ಅಥವಾ ಮನೆಯ ಟ್ಯಾಂಕ್ನಲ್ಲಿ ಮುಳುಗಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯು 4 ಅಡಿ ಮೀರಬಾರದು ಹಾಗೂ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯು 2 ಅಡಿ ಮೀರಬಾರದು ಎಂದು ಹೇಳಲಾಗಿದೆ.
ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ, ಡಿಜೆ ಗಳಿಗೆ ಕೊಕ್ ನೀಡಲಾಗಿದೆ.