ಉಡುಪಿ: ಉಡುಪಿಯಲ್ಲಿ ನಡೆದಿದ್ದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮೀನಾಕ್ಷಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾತ್ಮಾ ಗಾಂಧೀಜಿಯವರು ಜಿನ್ನಾ ಜೊತೆಸೇರಿಕೊಂಡು ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ. ಹೀಗಾಗಿ ಅವರನ್ನು ನಾವು ಒಪ್ಪುವುದಿಲ್ಲ ಎಂದು ಡೆಹ್ರಾಡೂನ್ ಚಿಂತಕಿ ಮೀನಾಕ್ಷಿ ಸೆಹ್ರಾವತ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೀನಾಕ್ಷಿ ವಿರುದ್ಧ ಎಫ್ ಐ ಆರ್ ದಖಲಾಗಿದೆ.
ಕರ್ನಾಟಕದ ಪೊಲೀಸರು ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾನು ರಾಷ್ಟ್ರಪಿತ ಎಂದು ಕರೆಯಲ್ಪಡುವ ಗಾಂಧೀಜಿ ಬಗ್ಗೆ ಕೆಲ ಕಮೆಂಟ್ ಗಳನ್ನು ಮಾಡಿದ್ದರಿಂದ ನನ್ನ ವಿರುದ್ಧ ಕೇಸ್ ದಾಖಲಾಗಿದೆ. ಐತಿಹಾಸಿಕ ಸತ್ಯ ಸಂಗತಿ ಹೇಳಿದ್ದಕ್ಕೇ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೀನಾಕ್ಷಿ ತಿಳಿಸಿದ್ದಾರೆ.
ನಾನು ಗಾಂಧೀಜಿ ಬಗ್ಗೆ ಮಾತನಾಡಿದ್ದಕ್ಕೆ ನನ್ನ ಮೇಲೆ ಕೇಸ್ ದಾಖಲಾಗಿದೆ. ಅದೇ ಭಗವಾನ್ ಶ್ರೀಕೃಷ್ಣ, ಶ್ರೀರಾಮ, ಭಗತ್ ಸಿಂಗ್, ವೀರ ಸಾವರ್ಕರ್, ಹಿಂದೂ ದೇವರನ್ನು ನಿಂದಿಸುವವರ ವಿರುದ್ಧ ಯಾವತ್ತೂ ಪ್ರಕರಣ ದಾಖಲಾಗುವುದುದಿಲ್ಲ ಎಂದು ಕಿಡಿಕಾರಿದ್ದಾರೆ.