ಬೆಂಗಳೂರು: ಎಲ್ಲಾ ನ್ಯಾಯಾಲಯಗಳಿಗಿಂತ ಮೇಲೆ ಅತ್ಯುನ್ನತವಾದ ಆತ್ಮಸಾಕ್ಷಿಯ ನ್ಯಾಯಾಲಯವಿದೆ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು ಎಂಬ ಮಾತನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈಗಿನ ನ್ಯಾಯಲಯಗಳಲ್ಲಿ ಎಲ್ಲರಿಗೂ ನ್ಯಾಯ ಸಿಗದೇ ಹೋಗಬಹುದು. ಆದರೆ ನಾವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಯಾರಾದರೂ ಹೊಗಳಲಿ, ತೆಗಳಲಿ. ಟೀಕೆ ಮಾಡಲಿ, ಬಿಡಲಿ. ಉಳಿದವರು ಗುರುತಿಸಲಿ ಬಿಡಲಿ ನಾವು ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.
ಕೇವಲ ಭಾಷಣದಿಂದ ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಅವರ ಆಶಯಗಳು ಈಡೇರುವುದಿಲ್ಲ. ಇವರಿಬ್ಬರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಜನ ಮಾನಸದಲ್ಲಿ ವಿಸ್ತರಿಸುತ್ತಲೇ ಸರ್ಕಾರ ಸಮ ಸಮಾಜ ನಿರ್ಮಿಸಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ನಾನು ಮತ್ತು ನಮ್ಮ ಸರ್ಕಾರ ಈ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅತ್ಯಂತ ಪ್ರಾಮಾಣಿಕ ನಾಯಕರು ಮತ್ತು ರಾಜಕಾರಣಿ. ಇವರೆಲ್ಲರ ಬದುಕಿನ ಸಂದೇಶಗಳು ನಮಗೆ ಮಾರ್ಗದರ್ಶನವಾದರೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ನಾವು ಈ ಮಹಾತ್ಮರಿಗೆ ಸಲ್ಲಿಸುವ ಗೌರವ ಎಂದರು.