ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ತಮ್ಮ ನೂತನ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಈ ಮೂಲಕ ಸಕ್ರಿಯ ರಾಜಕಾರಣಕ್ಕೆ ಜನಾರ್ಧನರೆಡ್ಡಿ ಮತ್ತೆ ಪದಾರ್ಪಣೆ ಮಾಡುವುದು ಖಚಿತವಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಜನಾರ್ಧನ ರೆಡ್ಡಿ ನೂತನ ಮನೆ ಖರೀದಿ ಮಾಡಿದ್ದು, ಇಂದು ಮನೆಯ ಗೃಹಪ್ರವೇಶ ನೆರವೇರಿದ್ದು, ನಿನ್ನೆ ರಾತ್ರಿಯಿಂದಲೇ ಹೋಮ-ಹವನ, ಪೂಜಾ ವಿಧಿವಿಧಾನಗಳು ನಡೆದಿದೆ. ಜನಾರ್ಧನ ರೆಡ್ಡಿ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಅರುಣಾಲಕ್ಷ್ಮಿ ಅವರೇ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಿದ್ದಾರೆ.
ಆಪ್ತರಿಗಷ್ಟೇ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ವೇಳೆ ಮಾತನಾಡಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ, ಬೆಂಗಳೂರಿನಲ್ಲಿ ಮನೆ ಮಾಡಿದರೆ ದೂರವಾಗುತ್ತೆ ಎಂಬ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಜನಾರ್ಧನ ರೆಡ್ದಿಯವರೇ ಹೇಳುತ್ತಾರೆ. ಇಷ್ಟು ವರ್ಷಗಳ ಕಾಲ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಇನ್ಮುಂದೆ ಜನರ ಮಧ್ಯೆ ಇದ್ದು, ಜನಸೇವೆ ಮಾಡಬೇಕು ಎಂದು ಬಯಸಿದ್ದಾರೆ ಎಂದು ಹೇಳಿದರು.
ಈ ಮೂಲಕ ಗಂಗಾವತಿಯಲ್ಲಿ ರೆಡ್ಡಿ ರಾಜಕೀಯ ಎಂಟ್ರಿ ಖಚಿತ ಎನ್ನಲಾಗಿದೆ.