ನವದೆಹಲಿ: ದೇಶಾದ್ಯಂತ ಹೆದ್ದಾರಿಗಳಲ್ಲಿ ಶಿಶು ಪಾಲನಾ ಕೇಂದ್ರ, ಸ್ವಚ್ಛ ಶೌಚಾಲಯ, ವೀಲ್ ಚೇರ್, ಇವಿ ಚಾರ್ಜಿಂಗ್ ಸೆಂಟರ್, ಪಾರ್ಕಿಂಗ್ ಸ್ಥಳ ಸೇರಿ ವಿವಿಧ ಅನುಕೂಲ, ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಹಮ್ ಸಫರ್ ನೀತಿಗೆ ಮಂಗಳವಾರ ಚಾಲನೆ ನೀಡಿದ್ದಾರೆ. ಪೆಟ್ರೋಲ್ ಪಂಪ್ ಗಳಲ್ಲಿ ತಾತ್ಕಾಲಿಕವಾಗಿ ತಂಗಲು ಡಾರ್ಮೆಂಟರಿ ವ್ಯವಸ್ಥೆ ಕಲ್ಪಿಸುವುದು ಕೂಡ ಹಮ್ ಸಫರ್ ಯೋಜನೆಯ ಭಾಗವಾಗಿದೆ.
ಹೆದ್ದಾರಿ ಬಳಕೆದಾರರಿಗೆ ಅನುಕೂಲ, ಸುರಕ್ಷಿತ, ಆಹ್ಲಾದಕರ ಅನುಭವ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಇದರೊಂದಿಗೆ ಉದ್ಯಮಿಗಳ ಬಲವರ್ಧನೆ, ಉದ್ಯೋಗ ಸೃಷ್ಟಿಯ ಗುರಿ ಗೊಂದಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ನಿತಿನ್ ಗಡ್ಕರಿ, ಹೆದ್ದಾರಿ ಜಾಲದುದ್ದಕ್ಕೂ ಸುರಕ್ಷಿತ ಮತ್ತು ತಡೆರಹಿತ ಪ್ರಯಾಣ ಅನುಭವಕ್ಕಾಗಿ ಅತ್ಯಾಧುನಿಕ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಹಮ್ ಸಫರ್ ಬ್ರಾಂಡ್ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕತೆಗೆ ಮತ್ತೊಂದು ಹೆಸರಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.