ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಜನತಾದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನ ಹೆಸರಿನ ಟ್ರಸ್ಟ್ ಗೆ ನಿವೇಶನ ಮಂಜೂರು ಮಾಡಿಸಿದ್ದಾರೆ.
ಸಿಎಂ ಸಿದರಾಮಯ್ಯ ತಮ್ಮ ಮಗ ದಿ.ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೆ ನಿವೇಶನ ಮಂಜೂರು ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗದಗ ನಗರದಲ್ಲಿ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೆ ಮಂಜೂರಾಗಿದ್ದ ನಿವೇಶನ ಕಿತ್ತೂರು ಚನ್ನಮ್ಮ ಟ್ರಸ್ಟ್ ಗೆ ನೀಡಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಜನತಾ ದರ್ಶನದ ವೇಳೆ ಸಿಎಂ ಸಿದ್ದರಾಮಯ್ಯನವರಿಗೆ ದೂರು ನೀಡಿದ್ದರು.
ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಗದಗ ನಗರದಲ್ಲಿ ರಾಕೇಶ್ ಸಿದ್ದರಾಮಯ್ಯ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಲು 22 ಗುಂಟೆ ಜಮೀನು ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಈ ಹಿಂದೆ ರಾಕೇಶ್ ಸಿದ್ದರಾಮಯ್ಯ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಲು 22 ಗುಂಟೆ ಜಮೀನು ಮಂಜೂರು ಮಾಡಿಕೊಡುವಂತೆ ಡಿಸಿಗೆ ಪತ್ರ ಬರೆಯಲಾಗಿತ್ತು. ಆದರೆ ಈ ಭೂಮಿಯನ್ನು ಕಿತ್ತೂರು ಚನ್ನಮ್ಮ ಸಮುದಾಯ ಭವನಕ್ಕೆ ನೀಡುವಂತೆ ಸಚಿವ ಹೆಚ್.ಕೆ.ಪಾಟೀಲ್ ಗದಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜನತಾದರ್ಶನದಲ್ಲಿ ಸಿಎಂ ಗೆ ದೂರು ನೀಡಲಾಗಿತ್ತು. ತಕ್ಷಣ ಗದಗ ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ ಭೂಮಿಯನ್ನು ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೆ ನೀಡುವಂತೆ ತಾಕೀತು ಮಾಡಿದ್ದಾರೆ.