ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಬರ ಪರಿಸ್ಥಿತಿಯಿಂದಾಗಿ ರೈತರು ಕಂಗಾಲಾಗಿದ್ದು, ಬೆಳೆದ ಬೆಳೆಗಳಿಗೂ ನೀರು ಹರಿಸಲು ಸಾಧ್ಯವಾಗದೇ ಗದ್ದೆಯಲ್ಲಿ ಬೆಳೆಗಳು ಒಣಗುತ್ತಿವೆ. ಈ ನಡುವೆ ಬರ ಪೀಡಿತ ತಾಲೂಕುಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆಯಾದರೂ ಕೆಲ ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಟ್ಟಿದೆ. ಇದರಿಂದ ರೈತರ ಆಕ್ರೋಶ ಇಮ್ಮಡಿಯಾಗಿದೆ.
ಒಂದೆಡೆ ಬರ, ಇನ್ನೊಂದೆಡೆ ಸರ್ಕಾರದಿಂದ ಸಿಗಬೇಕಾದ ಪರಿಹಾರಕ್ಕೂ ತತ್ವಾರ ಎಂಬಂತಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕನ್ನು ಬರ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ರೈತರು ಮುಂಡರಗಿ ಬಂದ್ ಗೆ ಕರೆ ನೀಡಿದ್ದಾರೆ.
ಸೆ.25ರಂದು ಮುಂಡರಗಿ ತಾಲೂಕು ಬಂದ್ ಗೆ ಅನ್ನದಾತರು ಕರೆ ನೀಡಿದ್ದು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. 7 ತಾಲೂಕುಗಳ ಪೈಕಿ ಮುಂಡರಗಿ ತಾಲೂಕನ್ನು ಬಿಟ್ಟು 6 ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮ ಖಂಡಿಸಿ ಹಾಗೂ ಮುಂಡರಗಿಯನ್ನು ಬರ ಪೀಡಿತ ತಾಲೂಕು ಘೋಷಣೆ ಮಾಡುವಂತೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ. ರೈತ ಸಂಘಟನೆಗಳ ಬಂದ್ ಕರೆಗೆ ಕನ್ನಡಪರ ಸಂಘಟನೆಗಳು ಸೇರಿ 10ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.