
ಗದಗ: ರಾಷ್ಟ್ರೀಯ ಬಾಲ ಸಂಸ್ಥೆ ಕಾರ್ಯಕ್ರಮದ ವೈದ್ಯಾಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ವೈದ್ಯೆಯಾಗಿದ್ದ ಡಾ.ಗೀತಾ ಕೋರಿ ಆತ್ಮಹತ್ಯೆಗೆ ಶರಣಾದವರು. ಗದಗ ತಾಲೂಕಿನ ಕೋಟಮಚಗಿ ಗ್ರಾಮದ ಆಯುಷ್ ಇಲಾಖೆ ವೈದ್ಯ ಪತಿ ಡಾ.ಕುಶಾಲ್ ಕೋರಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪತಿಯೇ ವೈದ್ಯೆ ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ಡಾ.ಗೀತಾ ಪೋಷಕರು ಆರೋಪಿಸಿದ್ದಾರೆ.
ಡಾ.ಕುಶಾಲ್ ಕೋರಿ ಹಾಗೂ ಡಾ.ಗೀತಾ ಕಾಲೇಜಿನಿಂದಲೂ ಸ್ನೇಹಿತರಾಗಿದ್ದರು. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ವೈದ್ಯ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈಗ ಡಾ.ಗೀತಾ ಶವ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತಿ ಡಾ.ಕುಶಾಲ್ ಕೋರಿಯೇ ಪತ್ನಿಯನ್ನು ಕೊಂದಿದ್ದಾಗಿ ಗೀತಾ ಕುಟುಂಬದವರು ದೂರು ನೀಡಿದ್ದಾರೆ. ವೈದ್ಯೆ ಸಾವು ಕೊಲೆಯೋ? ಆತ್ಮಹತ್ಯೆಯೋ? ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿರುವ ಗದಗ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.