ಗದಗ: ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 48 ಗಂಟೆಗಳಲ್ಲಿ ಪೊಲೀಸರು 8 ಆರೋಪಿಗಳನ್ನು ಬಂಧಿಸಿ ಪ್ರಕರಣ ಭೆದಿಸಿದ್ದಾರೆ.
ಮಗನೇ ತನ್ನ ಕುಟುಂಬದ ಸದಸ್ಯರ ಹತ್ಯೆಗೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ಆಸ್ತಿ ಕಲಹದ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಗದಗ ಎಸ್ ಪಿ ನೇಮಗೌಡ ತಿಳಿಸಿದ್ದಾರೆ.
ಪ್ರಮುಖ ಆರೋಪಿ ವಿನಾಯಕ್ ಬಾಕಳೆ, ಫೈರೋಜ್ ಖಾಜಿ, ಸಾಹಿಲ್, ಸೋಹೆಲ್, ಸುಲ್ತಾನ್ ಶೇಖರ್, ಜಿಶಾನ್ ಖಾಜಿ, ಮಹೇಶ್ ಸಾಳೊಂಕೆ, ವಾಹಿದ್ ಬೆಪಾರಿ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗನಾದ ವಿನಾಯಕ್ ಬಾಕಳೆ, ಪ್ರಕಾಶ್ ಬಾಕಳೆಯ ಎರಡನೇ ಹೆಂಡತಿ ಮಗನಾದ ಕಾರ್ತಿಕ್ ಹತ್ಯೆಗೆ ಫೈರೋಜ್ ಖಾಜಿ ಎಂಬಾತನಿಗೆ 65 ಲಕ್ಷಕ್ಕೆ ಸುಪಾರಿ ನೀಡಿದ್ದ. 2 ಲಕ್ಷ ಅಡ್ವಾನ್ಸ್ ನೀಡಿದ್ದ. ಪ್ರಕಾಶ್ ಬಾಕಳೆ ಮೊದಲ ಪತ್ನಿ ಸಾವಿನ ಬಳಿಕ ಎರಡನೇ ವಿವಾಹವಾಗಿದ್ದ. ಮೊದಲ ಪತ್ನಿ ಪುತ್ರ ವಿನಾಯಕ್ ಬಾಕಳೆ ಹೆಸರಲ್ಲಿ ಹಲವು ಆಸ್ತಿಗಳು ಇದ್ದವು. ಕೆಲ ಆಸ್ತಿಗಳನ್ನು ವಿನಾಯಕ್, ಪ್ರಕಾಶ್ ಬಾಕಳೆಗೆ ತಿಳಿಸದೇ ಮಾರಾಟ ಮಾಡಿದ್ದ. ಇದೆ ಕಾರಣಕ್ಕೆ ಅಪ್ಪ-ಮಗನ ನಡುವೆ ಜಗಳವಾಗಿತ್ತು. ತಿಳಿಸದೇ ಆಸ್ತಿ ಮಾರಾಟ ಮಾಡಿದ್ದಕ್ಕೆ ಪ್ರಕಾಶ್ ಬಾಕಳೆ ವಿನಾಯಕ್ ನನ್ನು ಪ್ರಶ್ನಿಸಿದ್ದರು. ಇದೇ ಕಾರಣಕ್ಕೆ ಎರಡನೇ ಹೆಂಡತಿ ಪುತ್ರ ಕಾರ್ತಿಕ್ ನನ್ನು ಕೊಲ್ಲಲು ವಿನಾಯಕ್ ಪ್ಲಾನ್ ಮಾಡಿ ಸುಪಾರಿ ಕೊಟ್ಟಿದ್ದ.
ಹೊರ ರಾಜ್ಯದ ಹಂತಕರಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದ. ಇದೀಗ ತನಿಖೆ ನಡೆಸಿರುವ ಪೊಲೀಸರು ವಿನಾಯಕ್ ಬಾಕಳೆ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿದ್ದಾರೆ.