
ಗದಗ: ಮಹಿಳೆಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಗದಗದ ಸಾಯಿ ನಗರದಲ್ಲಿ ನಡೆದಿದೆ. ಪತ್ನಿ ಹಸೀನಾ ಮೃತಪಟ್ಟ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಪತಿ ಇಮ್ತಿಯಾಜ್ ಊರಿಗೆ ಬಂದಿದ್ದು, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವ ವೇಳೆ ಮಹಿಳೆಯ ಕುಟುಂಬದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
14 ವರ್ಷಗಳ ಹಿಂದೆ ಇಮ್ತಿಯಾಜ್ ಮತ್ತು ಹಸೀನಾ ಅವರ ಮದುವೆಯಾಗಿದ್ದು, ಇಮ್ತಿಯಾಜ್ ವಿದೇಶದಲ್ಲಿ ಕೆಲಸದಲ್ಲಿದ್ದರು. ಊರಿನಲ್ಲಿದ್ದ ಹಸೀನಾ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆಯ ಕುಟುಂಬದವರಿಗೂ ಹಸೀನಾ ಸಾವನ್ನಪ್ಪಿದ ಬಗ್ಗೆ ಮಾಹಿತಿ ನೀಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವ ವೇಳೆ ಮಹಿಳೆಯ ಕತ್ತಿನ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತು ಪತ್ತೆಯಾಗಿದೆ. ಅಲ್ಲದೇ, ಹೆಬ್ಬೆಟ್ಟು ಹಾಕಿಸಿದ ಗುರುತು ಕೂಡ ಕಾಣಿಸಿದ್ದು, ಅನುಮಾನಗೊಂಡ ಮಹಿಳೆಯ ಕುಟುಂಬದವರು ತಮ್ಮ ಪುತ್ರಿಯನ್ನು ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಗದಗ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲೆಸಿಕೊಂಡು ತನಿಖೆ ಕೈಗೊಂಡಿದ್ದಾರೆ.