
ಗದಗ: ಗದಗ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರು ಅಮಾನವೀಯ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸಕಾಲಕ್ಕೆ ವೈದ್ಯರು ಹೆರಿಗೆ ಮಾಡಿಸದ ಕಾರಣ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ವೈದ್ಯರು ಕಪಾಳಮೋಕ್ಷ ಮಾಡಿದ್ದಾರೆ. ಹೆರಿಗೆಗೆ ಕರೆದುಕೊಂಡು ಬಂದಿದ್ದ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಕಪಾಳ ಮೋಕ್ಷ ಮಾಡಿದ್ದಲ್ಲದೆ ಒಂಟಿಕಾಲಲ್ಲಿ ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜಿಮ್ಸ್ ವೈದ್ಯರ ದೌರ್ಜನ್ಯ ಖಂಡಿಸಿ ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಮ್ಸ್ ಎದುರು ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದು ಕಡೆ ಮಗು ಕಳೆದುಕೊಂಡು ಬಾಣಂತಿ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಗರ್ಭದಲ್ಲೇ ಮಗು ಮೃತಪಟ್ಟಿರುವ ಕುರಿತಾಗಿ ವೈದ್ಯರು ಸ್ಪಷ್ಟನೆ ನೀಡಿಲ್ಲ. ಮಹಿಳೆ ಮತ್ತು ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು, ಸಂಬಂಧಿಕರು ಧರಣಿ ನಡೆಸಿದ್ದಾರೆ.