ಗದಗ: ಗದಗದಲ್ಲಿ ನಡೆದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಎಸ್.ಪಿ. ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ.
ತಡರಾತ್ರಿ ಪ್ರಕಾಶ ಬಾಕಳೆ ಅವರ ಮನೆಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳು ಹೇಗೆ ಬಂದರು ಎಂಬುದರ ಬಗ್ಗೆ ಕುಟುಂಬಸ್ಥರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ದರೋಡೆ ಉದ್ದೇಶದಿಂದ ಕೊಲೆ ಮಾಡಿರುವ ಸಾಧ್ಯತೆ ಇಲ್ಲ. ಮೃತ ದೇಹಗಳ ಮೇಲಿನ ಆಭರಣಗಳು ಹಾಗೆಯೇ ಇವೆ. ಎಸ್.ಪಿ. ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಸಾರ್ವಜನಿಕರ ಬಳಿ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಬಹುದು. ಶೀಘ್ರವೇ ಹಂತಕರನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸರು ಅಧೀಕ್ಷಕ ಬಿ.ಎಸ್. ನೇಮಗೌಡ ಹೇಳಿದ್ದಾರೆ.