
ಗದಗ: ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ದಿ ಗ್ರಾಮದಲ್ಲಿ ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಮತ್ತು ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆ ನರಗುಂದ ಠಾಣೆ ಪೊಲೀಸರು ಅತಿಥಿ ಶಿಕ್ಷಕ ಮುತ್ತಪ್ಪನನ್ನು ಬಂಧಿಸಿದ್ದಾರೆ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ಬಂಧಿತ ಮುತ್ತಪ್ಪ ಮತ್ತು ಹಲ್ಲೆಗೊಳಗಾದ ಶಿಕ್ಷಕಿ ನಡುವೆ ಸಂಬಂಧವಿತ್ತು. ವಾಟ್ಸಾಪ್ ನಲ್ಲಿ ಅವರು ಚಾಟಿಂಗ್ ಮಾಡುತ್ತಿದ್ದರು. ಸಹಶಿಕ್ಷಕರೊಬ್ಬರ ಜೊತೆಗೂ ಶಿಕ್ಷಕಿ ಸಂಪರ್ಕದಲ್ಲಿದ್ದರು. ಆ ಶಿಕ್ಷಕ ಮತ್ತು ಶಿಕ್ಷಕಿ ಮೇಲೆ ಕುದಿಯುತ್ತಿದ್ದ ಮುತ್ತಪ್ಪ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ.
ಆದರೆ, ಶಿಕ್ಷಕಿ ಮೇಲಿನ ಕೋಪದಿಂದ ಪುತ್ರ ಭರತ್(10) ನನ್ನು ಹತ್ಯೆ ಮಾಡಿದ್ದಾನೆ. ಸಲಾಕೆಯಿಂದ ಹೊಡೆದು ಶಾಲಾ ಕಟ್ಟಡದಿಂದ ಕೆಳಗೆ ತಳ್ಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಶಿಕ್ಷಕಿ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.