ವಿಶ್ವದಾದ್ಯಂತ ಅನೇಕ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಭಾರತ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಅನಾದಿ ಕಾಲದಿಂದಲೂ ಕೆಲವೊಂದು ನಂಬಲಸಾಧ್ಯವಾದ ಪದ್ಧತಿ ಜಾರಿಯಲ್ಲಿದೆ. ಈಗ್ಲೂ ಜನರು ಅದನ್ನು ಪಾಲಿಸಿಕೊಂಡು ಬರ್ತಿದ್ದಾರೆ.
ಹಿಂದೂ ಧರ್ಮದಲ್ಲಿ ಮದುವೆಯ ನಂತರ, ಮಹಿಳೆಯರು ಸುಮಂಗಲಿಯಂತೆ ಬದುಕುತ್ತಾರೆ. ಕೈಗೆ ಬಳೆ, ಕಾಲುಂಗುರ, ಸಿಂಧೂರ, ಮಂಗಲಸೂತ್ರ ಸೇರಿದಂತೆ ಸುಮಂಗಲಿಯರ ಆಭರಣ ಧರಿಸುತ್ತಾರೆ. ಗಂಡ ಜೀವಂತವಿರುವಾಗ, ಸಿಂಧೂರ ಇಟ್ಟುಕೊಳ್ಳದಿರುವುದು, ಮಂಗಲಸೂತ್ರ ಧರಿಸದಿರುವುದು, ಬಿಳಿ ಸೀರೆ ಉಡುವುದನ್ನು ಅಶುಭವೆಂದು ನಂಬಲಾಗಿದೆ. ಇದು ಗಂಡನ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆಯಿದೆ. ಆದ್ರೆ ದೇಶದಲ್ಲಿ ಒಂದು ಸಮುದಾಯವಿದೆ. ಆ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರತಿ ವರ್ಷ ವಿಧವೆಯಂತಹ ಜೀವನವನ್ನು ನಡೆಸುತ್ತಾರೆ. ಪತಿ ಬದುಕಿದ್ದರೂ ಈ ಸಮುದಾಯದ ಮಹಿಳೆಯರು ಪ್ರತಿ ವರ್ಷ 5 ತಿಂಗಳು ವಿಧವೆಯರಂತೆ ಬದುಕುತ್ತಾರೆ.
ಆಶ್ಚರ್ಯವಾದ್ರೂ ಇದು ಸತ್ಯ. ಗಚ್ವಾಹ ಸಮುದಾಯದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಈ ಸಮುದಾಯದ ಮಹಿಳೆಯರು ಹಿಂದಿನಿಂದಲೂ ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದ್ದಾರೆ. ತನ್ನ ಗಂಡನ ದೀರ್ಘಾಯುಷ್ಯಕ್ಕಾಗಿ ಅವರು 5 ತಿಂಗಳ ಕಾಲ ಖಿನ್ನತೆಗೆ ಒಳಗಾಗುತ್ತಾರೆ.
ಗಚ್ವಾಹ ಸಮುದಾಯದ ಜನರು ಪೂರ್ವ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಸಮುದಾಯದ ಪುರುಷರು ಐದು ತಿಂಗಳ ಕಾಲ ತಾಳೆ ಮರಗಳಿಂದ ಕಡ್ಡಿ ತೆಗೆಯುವ ಕೆಲಸ ಮಾಡುತ್ತಾರೆ. ಈ ಸಮಯದಲ್ಲಿ ಮಹಿಳೆಯರು ವಿಧವೆಯರಂತೆ ಜೀವನ ನಡೆಸುತ್ತಾರೆ.
ಗಚ್ವಾಹ ಸಮುದಾಯದವರು ತಾರ್ಕುಲ್ಹಾ ದೇವಿಯನ್ನು ತಮ್ಮ ಕುಲದೇವಿ ಎಂದು ನಂಬುತ್ತಾರೆ. ತಾಳೆ ಮರದಿಂದ ಕಡ್ಡಿ ತೆಗೆಯುವುದು ಬಹಳ ಕಷ್ಟದ ಕೆಲಸ. ತಾಳೆ ಮರಗಳು ತುಂಬಾ ಎತ್ತರ ಮತ್ತು ನೇರವಾಗಿರುತ್ತವೆ. ಇಲ್ಲಿ ಎಡವಿದ್ರೆ ಸಾವು ನಿಶ್ಚಿತ. ಅದಕ್ಕಾಗಿಯೇ ಅವರ ಪತ್ನಿಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಕುಲದೇವಿಯನ್ನು ಪ್ರಾರ್ಥಿಸುತ್ತಾರೆ ಮತ್ತು ತಾಯಿಯ ದೇವಸ್ಥಾನದಲ್ಲಿ ತಮ್ಮ ಅಲಂಕಾರವನ್ನು ಇಡುತ್ತಾರೆ. ಈ ರೀತಿ ಮಾಡುವುದರಿಂದ ಕುಲದೇವಿಗೆ ಸಂತೋಷವಾಗುತ್ತದೆ. ಪತಿಗೆ ರಕ್ಷಣೆ ನೀಡುತ್ತಾಳೆ ಎಂದು ಅಲ್ಲಿನವರು ನಂಬಿದ್ದಾರೆ.