ಮೈಸೂರು: ಉಪಚುನಾವಣೆ ಬಳಿಕ ಜೆಡಿಎಸ್ ನಾಯಕರ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ಶಾಸಕ ಜಿ.ಟಿ.ದೇವೇಗೌಡ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ಮಾತಿನ ಸಮರ ತಾರಕ್ಕೇರಿದ್ದು, ಒಬ್ಬರಿಗೊಬ್ಬರು ಸವಾಲು ಹಾಕಿದ್ದಾರೆ.
ನನ್ನಿಂದ ರಾಜಕೀಯಕ್ಕೆ ತೊಂದರೆ ಆಗಿದೆ ಎಂದು ಭಾವಿಸಿದ್ದರೆ ಆಣೆ ಪ್ರಮಾಣ ಮಾಡಲು ಚಾಮುಂಡಿ ಬೆಟ್ಟಕ್ಕೆ ಬರಲಿ ಎಂದು ಶಾಸಕ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡರಿಗೆ ಸವಾಲು ಹಾಕಿದ್ದರು.
ಇದೀಗ ಸಾ.ರಾ.ಮಹೇಶ್ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಜಿ.ಟಿ.ದೇವೇಗೌಡ, ನನ್ನನ್ನು ಉಪಚುನಾವಣಾ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ಹಾಗೆ ಹೇಳಿದರೆ ಅಂದೇ ನಾನು ರಾಜಕಾರಣವನ್ನು ಬಿಡುತ್ತೇನೆ ಎಂದಿದ್ದಾರೆ.
ಸಾ.ರಾ.ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಲ್ಕು. ಹೆಚ್.ಡಿ.ದೇವೇಗೌಡರು ನನ್ನನ್ನು ಉಪಚುನಾವಣಾ ಪ್ರಚಾರಕ್ಕೆ ಕರೆದಿದ್ದೆ ಎಂದು ಹೇಳಲಿ. ಅಂದೇ ರಾಜಕಾರಣ ಬಿಡುತ್ತೇನೆ ಎಂದಿದ್ದಾರೆ. ಸುಳ್ಲು ಹೇಳಿಕೊಂಡು ಚಾಮುಂಡಿ ಬೆಟ್ಟಕ್ಕೆ ಬಾ ಎಂದರೆ ಹೋಗಲು ಸಾಧ್ಯನಾ? ಈ ಹಿಂದೆ ವಿಶ್ವನಾಥ್ ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು? ಎಂದು ಪ್ರಶ್ನಿಸಿದ್ದಾರೆ.
ನಾನು ಹೇಳುತ್ತಿರುವುದು ನಿಜ. ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ. ನಾನು ಯಾವುದಕ್ಕೂ ಹೆದರಲ್ಲ, ಸುಳ್ಳನ್ನು ಹೇಳಲ್ಲ. ಸಾ.ರಾ.ಮಹೇಶ್ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಲಿ ಎಂದರು.