ಬೆಂಗಳೂರು: ಆಫ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ತಡೆ ಮತ್ತು ಆನ್ಲೈನ್ ಮನಿ ಗೇಮಿಂಗ್ ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರತ್ಯೇಕ ಕಾಯ್ದೆಯನ್ನು ಶೀಘ್ರವೇ ಜಾರಿಗೆ ತರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ರವಿಕುಮಾರ್ ಗಣಿಗ ಅವರು ಕ್ರಿಕೆಟ್ ಬೆಟ್ಟಿಂಗ್ ತಡೆಗೆ ಕಠಿಣ ಕಾನೂನು ಜಾರಿಗೆ ಮನವಿ ಮಾಡಿದ್ದು, ಪಕ್ಷಾತೀತವಾಗಿ ಸದಸ್ಯರು ದನಿಗೂಡಿಸಿ ಕ್ರಿಕೆಟ್ ಬೆಟ್ಟಿಂಗ್ ಜೊತೆಗೆ ಆನ್ಲೈನ್ ಗೇಮಿಂಗ್ ಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಸಚಿವ ಡಾ.ಜಿ. ಪರಮೇಶ್ವರ ಅವರು, ರಾಜ್ಯಾದ್ಯಂತ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಸಾವಿರಾರು ಕೋಟಿ ರೂ. ವ್ಯವಹಾರ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾನೂನು ಕ್ರಮ ಬಿಗಿಗೊಳಿಸಲಾಗುತ್ತದೆ. ಆನ್ಲೈನ್ ಮನಿ ಗೇಮಿಂಗ್ ಗಳಿಂದ ಯುವಕರು ಹಾಳಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲಾಗುತ್ತದೆ. ಬೆಟ್ಟಿಂಗ್ ಮತ್ತು ಆನ್ಲೈನ್ ಗೇಮಿಂಗ್ ನಿಯಂತ್ರಣಕ್ಕೆ ಶೀಘ್ರವೇ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.