ನವದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಹಲವು ದಿಗ್ಗಜ ನಾಯಕರು ಆಗಮಿಸಿದ್ದು, ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಮೊದಲು ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ನಾಯಕರನ್ನು ಸ್ವಾಗತಿಸಿದ ನಂತರ ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು.
ಜಿ20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ನರೇಂದ್ರ ಮೋದಿ, ಜಿ20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದರು. ಈ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾದಂತಾಗಿದೆ.
ಇದೇ ವೇಳೆ ಮೋದಿ ಸಬ್ ಕಾ ಸಾತ್, ಸಬ್ ಕಾ ವಿಕಾಸ್ಗೆ ಮಂತ್ರವನ್ನು ಪಠಿಸಬೇಕಿದೆ ಎಂದು ಹೇಳಿದರು. ಭಯೋತ್ಪಾದನೆ, ಸೈಬರ್ ದಾಳಿ ಭೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಿಂತಿಸಬೇಕಿದೆ ಎಂದರು.ಕೊರೊನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಕೊರೊನಾದಿಂದ ಅನೇಕ ದೇಶಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈಗಷ್ಟೇ ಎಲ್ಲಾ ದೇಶಗಳು ಆರ್ಥಿಕವಾಗಿ ಚೇತರಿಕೆ ಕಾಣುತ್ತಿವೆ ಎಂದು ಮೋದಿ ಹೇಳಿದರು. ಜಿ 20 ಯಲ್ಲಿ ವಿಶ್ವದ ದಿಗ್ಗಜ ನಾಯಕರ ಸಮಾಗಮವಾಗಿದ್ದು, ಇಂದು ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ.