ಕೋವಿಡ್-19ನ ಮುಂದಿನ ರೂಪಾಂತರವು ಓಮಿಕ್ರಾನ್‌ಗಿಂತ ಹೆಚ್ಚು ವ್ಯಾಪಕವಾದ ಸಾಂಕ್ರಾಮಿಕವಾಗಿರುತ್ತದೆ ಮತ್ತು ಈ ತಳಿಗಳು ಲಘುವಾಗಿರುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ -19 ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಕೋವ್ ಪ್ರಕಾರ, ವಿಜ್ಞಾನಿಗಳು ಉತ್ತರಿಸಬೇಕಾದ ನಿಜವಾದ ಪ್ರಶ್ನೆಯೆಂದರೆ, ಭವಿಷ್ಯದ ರೂಪಾಂತರಿಗಳು ಹೆಚ್ಚು ಮಾರಣಾಂತಿಕವಾಗಿದೆಯೇ ಅಥವಾ ಇಲ್ಲವೇ ಎಂಬುದಾಗಿದೆ.
ಕಳೆದ ವಾರ, ಸುಮಾರು 21 ದಶಲಕ್ಷ ಕೋವಿಡ್ ಪ್ರಕರಣಗಳು ವಿಶ್ವ ಆರೋಗ್ಯ ಸಂಸ್ಥೆಗೆ ವರದಿಯಾಗಿದೆ. ವೇಗವಾಗಿ ಪಸರುತ್ತಿರುವ ಓಮಿಕ್ರಾನ್ ರೂಪಾಂತರದಿಂದ ಸಾಪ್ತಾಹಿಕ ಪ್ರಕರಣಗಳ ಸಂಖ್ಯೆಯು ಹೊಸ ಜಾಗತಿಕ ದಾಖಲೆಯನ್ನು ಸ್ಥಾಪಿಸಿದೆ ಎಂದು ವ್ಯಾನ್ ಕೆರ್ಕೋವ್ ಮಂಗಳವಾರ ಹೇಳಿದ್ದಾರೆ.
ಒಮಿಕ್ರಾನ್ ವೈರಸ್‌ನ ಹಿಂದಿನ ತಳಿಗಳಿಗಿಂತ ಕಡಿಮೆ ಅಪಾಯಕಾರಿ ವೈರಾಣು ಎಂದು ಕಂಡುಬಂದರೂ, ವಿಪರೀತ ಪ್ರಕರಣಗಳ ಕಾರಣ ಅನೇಕ ದೇಶಗಳಲ್ಲಿ ಆಸ್ಪತ್ರೆ ವ್ಯವಸ್ಥೆಗಳ ಮೇಲೆ ಒತ್ತಡ ಬೀಳುತ್ತಿವೆ.
“ಮುಂದಿನ ರೂಪಾಂತರವು ಹೆಚ್ಚು ಫಿಟ್ ಆಗಿದ್ದು, ಅದು ಇನ್ನಷ್ಟು ಹೆಚ್ಚು ಹರಡುತ್ತದೆ ಏಕೆಂದರೆ ಹಾಗೂ ಪ್ರಸ್ತುತ ಪರಿಚಲನೆಯಲ್ಲಿರುವ ರೂಪಾಂತರಿಯನ್ನು ಹಿಂದಿಕ್ಕುತ್ತದೆ,” ಎಂದು ವ್ಯಾನ್ ಕೆರ್ಕೋವ್ ಹೇಳಿದರು.
“ಭವಿಷ್ಯದ ರೂಪಾಂತರಗಳು ಹೆಚ್ಚು ಅಥವಾ ಕಡಿಮೆ ತೀವ್ರವಾಗಿರುತ್ತವೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ,” ಎನ್ನುವ ಕೆರ್ಕೋವ್, ಹಿಂದಿನ ರೂಪಾಂತರಗಳಿಗಿಂತ ಜನರನ್ನು ಕಡಿಮೆ ರೋಗಿಗಳನ್ನಾಗಿ ಮಾಡುವ ಸೌಮ್ಯವಾದ ತಳಿಗಳಾಗಿ ವೈರಸ್ ತನ್ನ ರೂಪಾಂತರ ಸರಣಿಯನ್ನು ಮುಂದುವರಿಸುತ್ತದೆ ಎಂಬ ಸಿದ್ಧಾಂತಗಳನ್ನು ನಂಬುವುದರ ವಿರುದ್ಧ ಎಚ್ಚರಿಸಿದ್ದಾರೆ.
“ಈ ಮಾತಿಗೆ ಯಾವುದೇ ಗ್ಯಾರಂಟಿ ಇಲ್ಲ. ಅದು ನಿಜವಾಗಿದೆ ಎಂದು ನಾವು ಭಾವಿಸುತ್ತೇವೆ, ಆದರೆ ಈ ಮಾತಿಗೆ ಯಾವುದೇ ಗ್ಯಾರಂಟಿ ಇಲ್ಲ ಮತ್ತು ನಾವು ಅದನ್ನು ನಂಬಲು ಸಾಧ್ಯವಿಲ್ಲ, ”ಎಂದು ಕೆರ್ಕೋವ್ ತಿಳಿಸಿದ್ದು, ಈ ಮಧ್ಯೆ ಜನರು ಸಾರ್ವಜನಿಕ ಸುರಕ್ಷತಾ ಕ್ರಮಗಳ ಮೆಲೆ ಗಮನಿಸಬೇಕು ಎಂದು ತಿಳಿಸಿದ್ದಾರೆ.
“ನೀವು ಶಾಶ್ವತವಾಗಿ ಮಾಸ್ಕ್ ಧರಿಸಬೇಕಾಗಿಲ್ಲ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ಆದರೆ ಸದ್ಯಕ್ಕೆ, ನಾವು ಹೀಗೆ ಮಾಡುವುದನ್ನು ಮುಂದುವರಿಸಬೇಕಾಗಿದೆ” ಎಂದು ವ್ಯಾನ್ ಕೆರ್ಕೋವ್ ಹೇಳಿದ್ದಾರೆ.