ಜನವರಿ 18 ರಂದು ಮಧ್ಯ ಪ್ರದೇಶದಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಸಾಗರ್‌ನ ತಿರುಪತಿ ಪುರಂ ಕಾಲೋನಿಯ ನಿವಾಸಿ ಪ್ರಹ್ಲಾದ್ ಸಿಂಗ್ ಎಂಬವರು ಕುಟುಂಬದೊಂದಿಗೆ ಮದುವೆಗೆ ತೆರಳುತ್ತಿದ್ದಾಗ ತಮ್ಮ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಕುಳಿತಿದ್ದ ನಾಯಿಗೆ ಆಕಸ್ಮಿಕವಾಗಿ ಕಾರಿನಿಂದ ಡಿಕ್ಕಿ ಹೊಡೆದಿದ್ದರು. ಅಲ್ಪ ಗಾಯಗೊಂಡಂತೆ ಕಂಡುಬಂದ ನಾಯಿ ಸ್ವಲ್ಪ ದೂರದವರೆಗೆ ಕಾರಿನ ಹಿಂದೆ ಓಡಿ ನಂತರ ಕಣ್ಮರೆಯಾಗಿತ್ತು.
ಹಲವಾರು ಗಂಟೆಗಳ ನಂತರ, ರಾತ್ರಿ 1 ಗಂಟೆ ಸುಮಾರಿಗೆ, ಪ್ರಹ್ಲಾದ್ ಸಿಂಗ್ ಮನೆಗೆ ಮರಳಿ ಬಂದು ಕಾರನ್ನು ಮನೆಯ ಹೊರಗೆ ನಿಲ್ಲಿಸಿದ್ದರು. ಅವರು ಹೊರಟು ಹೋದ ಕೆಲವೇ ಸಮಯದ ನಂತರ ನಾಯಿ ಕಾರಿನ ಬಳಿ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಯಿ ತನ್ನ ಪಂಜಗಳಿಂದ ಕಾರಿನ ಮೇಲ್ಮೈಯನ್ನು ಪದೇ ಪದೇ ಗೀಚುತ್ತಿರುವುದು ಕಂಡುಬಂದಿದೆ. ಇನ್ನೊಂದು ನಾಯಿ ಈ ಘಟನೆಯ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಮೊದಲನೆಯದನ್ನು ಸೇರಿಕೊಂಡಿತ್ತು.
ಮರುದಿನ ಬೆಳಿಗ್ಗೆ, ಪ್ರಹ್ಲಾದ್ ಸಿಂಗ್ ಕಾರಿನ ಮೇಲೆ ಗೀರುಗಳು ಕಾಣಿಸಿಕೊಂಡಿರುವುದನ್ನು ಗಮನಿಸಿದ್ದು, ಆರಂಭದಲ್ಲಿ ಅಕ್ಕಪಕ್ಕದ ಮಕ್ಕಳು ಮಾಡಿದ್ದಾರೆ ಎಂದು ಭಾವಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಹಿಂದೆ ಡಿಕ್ಕಿ ಹೊಡೆದ ಅದೇ ನಾಯಿ ಹಾನಿಯನ್ನು ಉಂಟುಮಾಡಿದೆ ಎಂಬುದರ ಅರಿವಾಗಿದೆ. ಗೀರುಗಳನ್ನು ಸರಿಪಡಿಸಲು ಸುಮಾರು 15,000 ರೂಪಾಯಿ ವೆಚ್ಚವಾಗಿದೆ.