ದಾವಣಗೆರೆ: ಶವ ಸಂಸ್ಕಾರ ವಿಚಾರವಾಗಿ ದಾವಣಗೆರೆ ತಾಲೂಕು ನಲ್ಕುಂದ ಗ್ರಾಮದಲ್ಲಿ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದ್ದು, ಮಾಯಕೊಂಡ ಠಾಣೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ನಲ್ಕುಂದ ಗ್ರಾಮದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ವಯೋಸಹಜವಾಗಿ ಮೃತಪಟ್ಟಿದ್ದು, ಅವರಿಗೆ ಸೇರಿದ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ನಲ್ಕುಂದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದ್ದರೂ, ನಲ್ಕುಂದ ಗ್ರಾಮದಲ್ಲಿ ಮಾತ್ರ ಮಳೆಯಾಗಿರಲಿಲ್ಲ. ಇದಕ್ಕೆ ಮಹಿಳೆಯ ಶವಸಂಸ್ಕಾರ ಕಾರಣವೆಂದು ಕೆಲವರು ಆರೋಪಿಸಿದ್ದಾರೆ.
ಮೃತಪಟ್ಟ ಮಹಿಳೆಗೆ ತೊನ್ನು ಇದ್ದ ಕಾರಣ ಅವರ ದೇಹವನ್ನು ಸುಡುವ ಬದಲು ಹೂಳಲಾಗಿದೆ. ಇದರಿಂದಾಗಿ ಮಳೆಯಾಗುತ್ತಿಲ್ಲ. ಅವರ ಶವ ಹೊರ ತೆಗೆದು ಸುಡಬೇಕು ಎಂದು ತೀರ್ಮಾನಿಸಿದ ಕೆಲವರು ಮೃತ ದೇಹವನ್ನು ಹೊರ ತೆಗೆದು ಸುಡುವ ಸಂದರ್ಭದಲ್ಲಿ ಮತ್ತೊಂದು ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದು, ಗಲಾಟೆ ನಡೆದಿದೆ.
ಸ್ಥಳದಲ್ಲಿ ಇದ್ದ ಹಿರಿಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಸಂಜೆ ಗ್ರಾಮದ ದೇವಾಲಯದ ಬಳಿ ಎರಡು ಸಮುದಾಯಗಳ ಜನರ ನಡುವೆ ಭಾರಿ ಗಲಾಟೆ, ಹೊಡೆದಾಟ ನಡೆದಿದ್ದು, ಎರಡು ಕಡೆಯವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡು ಸಮುದಾಯದವರು ಮಾಯಕೊಂಡ ಠಾಣೆಗೆ ದೂರು ನೀಡಿದ್ದಾರೆ.