ಮಂಡ್ಯ: ಪಂಚಭೂತಗಳಲ್ಲಿ ಮಾಜಿ ಸಂಸದ ಜಿ. ಮಾದೇಗೌಡರು ಲೀನರಾಗಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಕಾವೇರಿ ಹೋರಾಟಗಾರ, ಮಾಜಿ ಸಂಸದ ಮಾದೇಗೌಡರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಮೂರು ಸುತ್ತು ಕುಶಾಲತೋಪು ಸಿಡಿಸಿ ಜಿಲ್ಲಾಡಳಿತದಿಂದ ಗೌರವ ಸೂಚಿಸಲಾಗಿದ್ದು, ಮಾದೇಗೌಡರ ಪತ್ನಿ ಪದ್ಮಾ ಅವರಿಗೆ ತ್ರಿವರ್ಣಧ್ವಜ ಹಸ್ತಾಂತರಿಸಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹನುಮಂತನಗರದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಾದೇಗೌಡರ ಚಿತೆಗೆ ಪುತ್ರ ಡಾ. ಪ್ರಕಾಶ್ ಅಗ್ನಿಸ್ಪರ್ಶ ಮಾಡಿದ್ದಾರೆ.
ಆತ್ಮಲಿಂಗೇಶ್ವರ ದೇವಸ್ಥಾನದ ಸಮೀಪ ಅಂತ್ಯಕ್ರಿಯೆ ನೆರವೇರಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವತಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.