
ಬೆಂಗಳೂರು: ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್ ವುಡ್ ಜನಪ್ರಿಯ ನಿರ್ದೇಶಕ ಗುರುಪ್ರಸಾದ್(52) ಅಂತ್ಯಕ್ರಿಯೆ ಇಂದು ಸಂಜೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ನೆರವೇರಿಸಲಾಗಿದೆ.
ಐದಾರು ದಿನಗಳ ಹಿಂದೆಯೇ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ವಿಚಾರ ಗೊತ್ತಾಗಿ ಗುರುಪ್ರಸಾದ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದ ರೀತಿ ಅಂತಿಮ ವಿಧಿ ವಿಧಾನಗಳ ನೇರವೇರಿಸಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ.
ಮೊದಲ ಪತ್ನಿ ಆರತಿ, ಎರಡನೇ ಪತ್ನಿ ಸುಮಿತ್ರಾ, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ, ನೀನಾಸಂ ಸತೀಶ್, ತಬಲಾ ನಾಣಿ, ನಿರ್ದೇಶಕ ಯೋಗರಾಜ್ ಭಟ್, ಸೇರಿದಂತೆ ನಿರ್ದೇಶಕ ಗುರುಪ್ರಸಾದ್ ಕುಟುಂಬದವರು, ಸಂಬಂಧಿಕರು, ಚಿತ್ರರಂಗದವರು ಭಾಗಿಯಾಗಿದ್ದಾರೆ.