ಬೆಂಗಳೂರು: ಅನುದಾನ ಕೊರತೆಯ ಕಾರಣ ಗ್ಯಾರಂಟಿ ಯೋಜನೆ ಕಡಿತಕ್ಕೆ ಸಚಿವರಿಂದಲೇ ಒತ್ತಡ ಕೇಳಿ ಬಂದಿದೆ. ಉಚಿತ ಯೋಜನೆಗಳ ಪರಿಷ್ಕರಣೆಗೆ ಕಾಂಗ್ರೆಸ್ ಹೈಕಮಾಂಡ್ ಗೆ ಸಚಿವರಾದಾರ ಸತೀಶ್ ಜಾರಕಿಹೊಳಿ, ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವುದಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಡಾ.ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಪರಿಷ್ಕರಿಸುವ ಕೆಲಸ ನಡೆಯುತ್ತಿದೆ. ಉಳಿದ ಮೂರು ಗ್ಯಾರಂಟಿ ಯೋಜನೆಗಳಲ್ಲಿ ಬದಲಾವಣೆ ಇಲ್ಲವೆಂದು ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಇರುವ ಅಸಮಾಧಾನವನ್ನು ವರಿಷ್ಠರಿಗೆ ತಲುಪಿಸಿದ್ದೇನೆ. ಬಡವರಿಗೆ ಮಾತ್ರ ಯೋಜನೆ ನೀಡಲು ಹೇಳಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವ ಈಶ್ವರ್ ಖಂಡ್ರೆ, ಈಗ ಇರುವಂತೆಯೂ ಮುಂದೆಯೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ. ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಪಕ್ಷದಲ್ಲಿ, ಸರ್ಕಾರದಲ್ಲಿ ಚರ್ಚೆಯಾಗಿಲ್ಲ ಎಂದು ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ದುರ್ಬಳಕೆ ತಡೆಯುವ ನೆಪದಲ್ಲಿ ಗ್ಯಾರಂಟಿಗಳ ಪರಿಷ್ಕರಣೆಗೆ ಸಚಿವರು ವರಿಷ್ಠರಿಗೆ ಸಲಹೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಗ್ಯಾರಂಟಿಗಳಿಂದ ಕ್ಷೇತ್ರಗಳಿಗೆ ಅನುದಾನ ಕೊರತೆಯಾಗುತ್ತಿದೆ ಎಂಬ ಶಾಸಕರ ಅಸಮಾಧಾನದೊಂದಿಗೆ ಗ್ಯಾರಂಟಿಗಳು ಬಡವರ ಬದಲಿಗೆ ಶ್ರೀಮಂತರ ಪಾಲಾಗುತ್ತಿದೆ. ಹೀಗಾಗಿ ಪರಿಷ್ಕರಣೆ ಮಾಡಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.