ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ಕಾರಣ ಜನಸಾಮಾನ್ಯರಿಗೆ ಅರಿವಿಲ್ಲದಂತೆ ದಿನನಿತ್ಯವೂ ಜೇಬಿಗೆ ಕತ್ತರಿ ಬೀಳುತ್ತಿದೆ.
ಪೆಟ್ರೋಲ್ – ಡಿಸೇಲ್ ಬೆಲೆ ಏರಿಕೆಯಿಂದ ದೈನಂದಿನ ವಸ್ತುಗಳ ಬೆಲೆಯೂ ದುಬಾರಿಯಾಗಿದ್ದು, ಶ್ರೀಸಾಮಾನ್ಯ ಜೀವನ ನಡೆಸುವುದೇ ದುಸ್ತರವಾಗುವಂತಾಗಿದೆ. ಕೊರೊನಾ ಲಾಕ್ ಡೌನ್ ನಿಂದ ಮೊದಲೇ ಆರ್ಥಿಕವಾಗಿ ಕಂಗೆಟ್ಟಿದ್ದವರಿಗೆ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶುಕ್ರವಾರದಂದು ಸಹ ಪೆಟ್ರೋಲ್ ಬೆಲೆಯಲ್ಲಿ 28 ರಿಂದ 29 ಪೈಸೆಗಳಷ್ಟು ಏರಿಕೆಯಾಗಿದ್ದು, ಡಿಸೇಲ್ ಬೆಲೆಯಲ್ಲೂ 35 ರಿಂದ 38 ಪೈಸೆಗಳಷ್ಟು ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಲೀಟರ್ ಪೆಟ್ರೋಲ್ ಬೆಲೆ 88.14 ರೂಪಾಯಿಗಳಾಗಿದ್ದರೆ, ಪ್ರತಿ ಲೀಟರ್ ಡಿಸೇಲ್ ಬೆಲೆ 78.38 ರೂಪಾಯಿಗಳಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 94.64 ರೂಪಾಯಿಗಳಾಗಿದ್ದು, ಲೀಟರ್ ಡಿಸೇಲ್ ಬೆಲೆ 85.32 ರೂಪಾಯಿಗಳಾಗಿದೆ.