ರಷ್ಯಾ-ಉಕ್ರೇನ್ ಯುದ್ಧದ ತೀವ್ರ ಪರಿಣಾಮ ಭಾರತದ ಮೇಲಾಗುವುದರಲ್ಲಿ ಅನುಮಾನವೇ ಇಲ್ಲ. ಉಕ್ರೇನ್ ರಣರಂಗವಾಗುತ್ತಿದ್ದಂತೆ ಪ್ರಪಂಚದಾದ್ಯಂತ ಷೇರು ಮಾರುಕಟ್ಟೆ ಕುಸಿದಿದೆ. ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಸುಮಾರು 2,000 ಪಾಯಿಂಟ್‌ಗಳ ಕೆಳಕ್ಕಿಳಿಯಿತು. ಮತ್ತೊಂದೆಡೆ ನಿಫ್ಟಿ ಕೂಡ 570 ಪಾಯಿಂಟ್ ಕುಸಿತದೊಂದಿಗೆ 16,500 ರಷ್ಟಾಯ್ತು.
2004ರಿಂದೀಚೆಗೆ ಇದೇ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 100 ಡಾಲರ್ ದಾಟಿದೆ. ಇನ್ನು ಚಿನ್ನವಂತೂ ಗಗನ ಕುಸುಮ. ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 51,400 ರೂಪಾಯಿ ದಾಟಿದೆ. ಇದು ಕಳೆದ ಕೆಲವು ತಿಂಗಳುಗಳಲ್ಲೇ ಅತ್ಯಧಿಕವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಣ ಸಮರ ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ.
ಕ್ಷಣಕ್ಷಣಕ್ಕೂ ಉಲ್ಬಣಗೊಳ್ಳುತ್ತಿರುವ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಭಾರ ಭಾರತದ ಜನಸಾಮಾನ್ಯರ ಮೇಲೆ ಬೀಳುವುದರಲ್ಲಿ ಅನುಮಾನವೇ ಇಲ್ಲ. ಸರಕು ಮತ್ತು ಆಹಾರದ ಬೆಲೆ ಗಗನಕ್ಕೇರುವ ಆತಂಕ ಎದುರಾಗಿದೆ. ಕಳೆದ ನವೆಂಬರ್ ನಿಂದೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ತಟಸ್ಥವಾಗಿತ್ತು. ಆದ್ರೀಗ ಯುದ್ಧದ ಪರಿಣಾಮದಿಂದಾಗಿ ತೈಲಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಬಹುದು. ಮಾರ್ಚ್ ಆರಂಭದಲ್ಲೇ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಬಹುದು.
ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಸರ್ಕಾರ ಸಾರ್ವಜನಿಕರಿಗೆ ಶಾಕ್ ಕೊಡಲಿದೆ. ಕಚ್ಚಾ ತೈಲ ದುಬಾರಿಯಾಗುತ್ತಿದ್ದಂತೆ ಕೆರೊಸಿನ್ ಹಾಗೂ ಎಲ್ ಪಿ ಜಿ ಬೆಲೆಯಲ್ಲೂ ಹೆಚ್ಚಳವಾಗುತ್ತದೆ. ಸರಕು ಸಾಗಣೆ ವೆಚ್ಚ ಗಗನಕ್ಕೇರುತ್ತದೆ. ಪರಿಣಾಮ ಆಹಾರ ಪದಾರ್ಥಗಳು ದುಬಾರಿಯಾಗುವುದರಲ್ಲಿ ಅನುಮಾನವೇ ಇಲ್ಲ.